

ಡೈಲಿ ವಾರ್ತೆ: 20/ಫೆ. /2025


ಚಿಕ್ಕಮಗಳೂರು| ಬೆಂಗಳೂರಿನ ಯುವಕ, ಯುವತಿ ಅನುಮಾನಾಸ್ಪದ ಸಾವು – ಆಕೆ ಕಾರಲ್ಲಿ, ಆತ ಕಾಡಲ್ಲಿ!

ಚಿಕ್ಕಮಗಳೂರು: ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವಗಳು ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿವೆ.
ಯುವತಿ ಕಾರಿನಲ್ಲಿ ಸಾವನ್ನಪ್ಪಿದ್ದಾಳೆ. ಯುವಕನ ಮೃತದೇಹ ಕಾರು ನಿಂತ ಜಾಗದ ಪಕ್ಕದ ಮರದಲ್ಲಿ ಪತ್ತೆಯಾಗಿವೆ. ಇಬ್ಬರ ವಯಸ್ಸು ಅಂದಾಜು 25-30ರ ಒಳಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಇದೆ. ಯುವಕ ಕಾರು ನಿಂತ ಜಾಗದ ಪಕ್ಕದ ಮರಕ್ಕೆ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾನೆ. ಯುವಕ ನೇಣು ಹಾಕಿಕೊಂಡಿರುವ ಜಾಗ ಕೂಡ ಒಂದು ರೀತಿ ಅನುಮಾನಾಸ್ಪದವಾಗಿದೆ. ವೇಲ್ ಕುಣಿಕೆಗೆ ಕೊರಳೊಡ್ಡಿ ಜಿಗಿದರೆ ವೇಲ್ ತುಂಡಾಗುವ ಸಾಧ್ಯತೆಯೂ ಇದೆ. ಆದರೆ ಯುವಕನ ಶವ ನೇತಾಡುತ್ತಿತ್ತು. ಕಾರು ಕೂಡ ರಸ್ತೆಯಲ್ಲಿ ನಿಂತಿಲ್ಲ. ರಸ್ತೆ ಬದಿಯ ಪಕ್ಕದ ಚರಂಡಿಗೆ ಎರಡು ಚಕ್ರಗಳು ಇಳಿದಿದ್ದು ಕಾರು ಚರಂಡಿಗೆ ಏಕೆ? ಹೇಗೆ ಇಳಿಯಿತು ಎಂಬ ಪ್ರಶ್ನೆ ಮೂಡಿದೆ.
ಕಾರು ಮೂಲತಃ ಬೆಂಗಳೂರು ನೋಂದಣಿಯದ್ದಾಗಿದ್ದು, ಎಲ್ಲೋ ಬೋರ್ಡ್ ಗಾಡಿಯಾಗಿದೆ. ಮೇಲ್ನೋಟಕ್ಕೆ ಮೃತ ಯುವಕ ಡ್ರೈವರ್ ಇರಬಹುದು ಎಂದು ಅಂದಾಜಿಸಲಾಗಿದ್ದು, ಮೂಲತಃ ಬೆಂಗಳೂರಿನ ಮಾಗಡಿಯವನು ಎಂದು ತಿಳಿದು ಬಂದಿದೆ. ಯುವತಿ ಎಲ್ಲಿಯವಳು ಎಂಬ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.