ಡೈಲಿ ವಾರ್ತೆ: 21/ಫೆ. /2025

ಭೀಕರ ರಸ್ತೆ ಅಪಘಾತ: ಮಾಹಾ ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಒಂದೇ ಕುಟುಂಬದ 5 ಮಂದಿ ಸಾವು

ಬೀದರ್| ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದವರಿದ್ದ ಕ್ರೂಸರ್ ಕಾರೊಂದು ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಮಿರ್ಜಾಮುರಾದ್ ಪ್ರದೇಶದ ರೂಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಅಪಘಾತದ ತೀವ್ರತೆಗೆ ಕ್ರೂಸರ್ ನಲ್ಲಿದ್ದ ಮಹಿಳೆಯ ತಲೆ ದೇಹದಿಂದ ಬೆರ್ಪಟ್ಟಿತ್ತು. ಬೀದರ್ ಮೂಲದ ಒಂದೇ ಕುಟುಂಬದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಲಕ್ಷ್ಮೀ (56), ನೀಲಮ್ಮ (55), ಸಂತೋಷ್‌ಕುಮಾರ್ (42), ಸುನೀತಾ (42) ಎಂದು ಗುರುತಿಸಲಾಗಿದೆ.
ಕುಂಭಮೇಳಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಬೀದರ್‌ನ ಲಾಡಗೇರಿ ಬಡಾವಣೆಯ 12 ಮಂದಿ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಬೀದರ್‌ನ ಲಾಡಗೇರಿ ಬಡಾವಣೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಪ್ರಯಾಗ್‌ರಾಜ್ ಮತ್ತು ಕಾಶಿಯಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡು ಅಯೋಧ್ಯೆ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.