

ಡೈಲಿ ವಾರ್ತೆ: 22/ಫೆ. /2025


ಹುಟ್ಟೂರಿನ ಸನ್ಮಾನ ಬೇರೆ ಯಾವುದೇ ಸನ್ಮಾನಕ್ಕಿಂತ ಸರ್ವ ಶ್ರೇಷ್ಠ ; ಬದ್ರುದ್ದೀನ್ ಕೆ.ಮಾಣಿ.

ಬಂಟ್ವಾಳ : ಹುಟ್ಟೂರಿನಲ್ಲಿ ಸಿಗುವಂತಹ ಸನ್ಮಾನಗಳು ಬೇರೆ ಕಡೆ ಸಿಗುವಂತಹ ಅದ್ದೂರಿಯಾದ ಸನ್ಮಾನಕ್ಕಿಂತಲೂ ಸರ್ವಶ್ರೇಷ್ಠ ವಾಗಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ.ಮಾಣಿ ಹೇಳಿದರು.

ಮಾಣಿ, ಪೆರಾಜೆ, ನೆಟ್ಲಮುಡ್ನೂರು, ಅನಂತಾಡಿ, ಬರಿಮಾರು ಗ್ರಾಮ ವ್ಯಾಪ್ತಿಯ ನಾಗರಿಕ ಸನ್ಮಾನ ಸಮಿತಿ ವತಿಯಿಂದ ಶನಿವಾರ ಇಂಡಿಯನ್ ನೇರಳಕಟ್ಟೆ ಸಭಾ ಭವನದಲ್ಲಿ ನಡೆದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಹುದ್ದೆಯು ಪ್ರಥಮ ಬಾರಿಗೆ ದ.ಕ.ಜಿಲ್ಲೆಗೆ ಸಿಕ್ಕಿದೆ, ಈ ಕಾಯ್ದೆಯ ಸದುಪಯೋಗ ಈ ಭಾಗಕ್ಕೆ ಲಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲೋಕಯ್ಯ ಸೇರಾ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಂಗಾಧರ ಆಳ್ವ ಹಾಗೂ ಶೇಖರ ಪರವ ಎರ್ಮೆನಿಲೆ ಅವರನ್ನು ಸನ್ಮಾನಿಸಲಾಯಿತು.

ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಎಂ.ಪೆರಾಜೆ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ.ಪೂಜಾರಿ, ನಾಗರಿಕ ಸನ್ಮಾನ ಸಮಿತಿ ಸಂಚಾಲಕ ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾಗರಿಕ ಸನ್ಮಾನ ಸಮಿತಿ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅಭಿನಂದನಾ ಭಾಷಣಗೈದರು. ಮೆಲ್ವಿನ್ ಮಾರ್ಟಿಸ್, ನಿರಂಜನ್ ರೈ ಕುರ್ಲೆತ್ತಿಮಾರು, ಸನ್ಮಾನ ಪತ್ರ ವಾಚಿಸಿದರು ಹಾಜಿ ಎಸ್.ಎಂ. ಮಹಮ್ಮದ್ ರಫೀಕ್ ನೇರಳಕಟ್ಟೆ ಸ್ವಾಗತಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.