ಡೈಲಿ ವಾರ್ತೆ: 23/ಫೆ. /2025

ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವು, ತಾಯಿ ಗಂಭೀರ

ಚಿಕ್ಕಬಳ್ಳಾಪುರ: ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವನ್ನಪ್ಪಿದ್ದು, ತಾಯಿ ಗಂಭೀರ ಗಾಯಗೊಂಡಿರುವ ಘಟನೆ ಫೆ. 23 ರಂದು ಭಾನುವಾರ ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿಯಲ್ಲಿ ನಡೆದಿದೆ.

ಪೃಥ್ವಿರಾಜ್(3) ಮೃತ ಮಗು, ಗರ್ಭಿಣಿ ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯಗಳಾಗಿವೆ. ಗರ್ಭಿಣಿ ಮೋನಿಕಾ 15 ದಿನಗಳ ಹಿಂದೆ ಹೆರಿಗೆಗಾಗಿ ತವರು ಮನೆ ಹಾಲಗಾನಹಳ್ಳಿಗೆ ಬಂದಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.

ಮನೆಯ ಮುಂದೆ ಇದ್ದ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಮಗು ಸಾವನ್ನಪ್ಪಿದೆ. ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.