ಡೈಲಿ ವಾರ್ತೆ: 23/ಫೆ. /2025

ಕಸಕ್ಕೆ ಹಚ್ಚಿದ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾದ ಕಾರು!

ಆನೇಕಲ್: ಕಸಕ್ಕೆ ಹಚ್ಚಿದ ಬೆಂಕಿಯಿಂದಾಗಿ ಪಕ್ಕದಲ್ಲಿದ್ದ ಕಾರಿಗೆ ಕಿಡಿ ತಗುಲಿ, ಸಂಪೂರ್ಣ ಕರಕಲಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.

ವಿಘ್ನೇಶ್ ಎಂಬವರಿಗೆ ಸೇರಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ವಿಘ್ನೇಶ್ ಹಾಗೂ ಗೌರಿಶಂಕರ್ ಇಬ್ಬರು ಗೆಳೆಯರು. ಶನಿವಾರ ಬೆಳಗ್ಗೆ ಗೌರಿಶಂಕರ್ ಇದೇ ಕಾರಿನಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ಗೌರಿಶಂಕರ್ ತಮ್ಮ ಸ್ನೇಹಿತರೊಂದಿಗೆ ಸುತ್ತಾಡಿ, ರಾತ್ರಿ 12 ಗಂಟೆ ಸುಮಾರಿಗೆ ಚಂದಾಪುರದ ಕೀರ್ತಿ ಲೇಔಟ್ ಸಮೀಪದಲ್ಲಿ ಸ್ನೇಹಿತನೊಬ್ಬನ ಪಿಜಿ ಬಳಿ ಕಾರು ನಿಲ್ಲಿಸಿದ್ದರು.
ನಸುಕಿನ ಜಾವ 3 ಗಂಟೆ ವೇಳೆಗೆ ಕಾರಿನ ಪಕ್ಕದಲ್ಲಿದ್ದ ಕಸದ ರಾಶಿಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಇದರಿಂದ ಬೆಂಕಿಯ ಕಿಡಿ ಪಕ್ಕದಲ್ಲಿದ್ದ ಕಾರಿಗೆ ವ್ಯಾಪಿಸಿ, ಕಾರು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಸುಟ್ಟುಹೋದ ಕಾರಿನ ಪಕ್ಕದಲ್ಲಿ ಮತ್ತೊಂದು ಕಾರು, ದ್ವಿಚಕ್ರ ವಾಹನವಿದ್ದು, ಅದೃಷ್ಟವಶಾತ್ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ. ಸದ್ಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.