ಡೈಲಿ ವಾರ್ತೆ: 26/ಫೆ. /2025

ಮಹಾಶಿವರಾತ್ರಿ| 45 ದಿನಗಳ ಮಹಾಕುಂಭ ಮೇಳಕ್ಕೆ ಇಂದು ತೆರೆ: 64 ಕೋಟಿ ಭಕ್ತರಿಂದ ಪುಣ್ಯಸ್ನಾನ

ಪ್ರಯಾಗ್ ರಾಜ್: ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿರುವಂತೆಯೇ ಕಳೆದ 45 ದಿನಗಳಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಜಗತ್ತಿನ ದೊಡ್ಡ ಧಾರ್ಮಿಕ ಕಾರ್ಯಕ್ರಮ ‘ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಲಿದೆ.

ಪೌಶ್ ಪೂರ್ಣಿಮೆಯ ದಿನವಾದ ಇಂದು ಅಂತಿಮ ಪವಿತ್ರ ಸ್ನಾನಕ್ಕಾಗಿ ಮುಂಜಾನೆಯಿಂದ ಲಕ್ಷಾಂತರ ಜನರು ಮಹಾಕುಂಭ ನಗರಕ್ಕೆ ಆಗಮಿಸುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಮಿಂದೆಳುತ್ತಿದ್ದಾರೆ.

‘ಹರ ಹರ ಮಹಾದೇವ್’ ಘೋಷಣೆಗಳ ನಡುವೆ,ಸಂಗಮ ಸ್ಥಳದಲ್ಲಿ ಅಥವಾ ಸಮೀಪವಿರುವ ವಿವಿಧ ಘಾಟ್‌ಗಳಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದು, ಯಾವುದೇ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗದಂತೆ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಜನವರಿ 13ರಂದು ಪ್ರಾರಂಭವಾದ ಮಹಾಮೇಳ ಇಂದು ಮುಕ್ತಾಯಗೊಳ್ಳಲಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ 64 ಕೋಟಿಗೂ ಹೆಚ್ಚು ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮಹಾಶಿವರಾತ್ರಿಯು ಮಹತ್ವದ ಆಧ್ಯಾತ್ಮಿಕ ಕ್ಷಣವನ್ನು ಗುರುತಿಸುತ್ತಿದ್ದು, ಈ ಸಂಖ್ಯೆ 66 ಕೋಟಿ ಮೀರುವ ನಿರೀಕ್ಷೆಯಿದೆ.