

ಡೈಲಿ ವಾರ್ತೆ: 01/ಮಾರ್ಚ್ /2025


ಬ್ರಹ್ಮಾವರ|ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬೆಂಕಿ – ಲಕ್ಷಾಂತರ ರೂ. ನಷ್ಟ!, ಸ್ಥಳಕ್ಕೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಭೇಟಿ

ಬ್ರಹ್ಮಾವರ| ಬ್ರಹ್ಮಾವರ ಮಾರ್ಕೆಟ್ ಹತ್ತಿರದಲ್ಲಿರುವ ಎಸ್.ಎಲ್.ಆರ್.ಎಮ್ ಘಟಕದಲ್ಲಿ ತಡರಾತ್ರಿ ಹೊತ್ತಿಕೊಂಡ ಆಕಸ್ಮಿಕ ಬೆಂಕಿಯಿಂದ ಅಗ್ನಿ ಶಾಮಕ ದಳದ 6 ಗಂಟೆಯ ಪ್ರಯತ್ನದ ನಡುವೆಯೂ ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದೆ.

ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಘಟಕದ ಒಳಗೆ ನಿಲ್ಲಿಸಿದ ಮೂರು ಏಎಸ್ ವಾಹನಗಳು, ಒಂದು ಪಿಕಪ್, ಲಕ್ಷಾಂತರ ಮೌಲ್ಯದ ಕಸ, ಎರಡು ಬೇಲಿಂಗ್ ಮೆಶಿನ್, ಒಂದು ಬರ್ನಿಂಗ್ ಮೆಶಿನ್ , 6ಸಿಸಿ ಕೆಮರಾಗಳು, ಕಚೇರಿ, ಫೈಲ್ ಗಳು, ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಸಮೀಪದ ಗುಜರಿ ಅಂಗಡಿಗೂ ಬೆಂಕಿ ತಗುಲಿದ್ದು ಇಲ್ಲಿಯೂ ಒಂದಷ್ಟು ಹಾನಿಯಾಗಿದೆ. ಮಮತಾ ಇಲ್ಲೆಕ್ಟ್ರಿಕಲ್ಸ್ ಹೊರಗಡೆ ಇಟ್ಟ ಒಂದಷ್ಟು ಇಲೆಕ್ಟ್ರಿಲ್ಸ್ ವಸ್ತುಗಳು ಸುಟ್ಟುಹೋಗಿವೆ ಎನ್ನಲಾಗಿದೆ.
ಉಡುಪಿ, ಕುಂದಾಪುರ, ಮಲ್ಪೆ ಮೂರು ಕಡೆಗಳ ಅಗ್ನಿಶಾಮಕ ವಾಹನಗಳು, ಸಿಬ್ಬಂದಿಗಳು ಬೆಂಕಿನಂದಿಸಲು ಹರಸಾಹಸ ಪಟ್ಟರು. ಬೆಂಕಿ ಹೇಗೆ ತಗುಲಿದೆ ಎಂಬುದನ್ನು ಪತ್ತೆ ಹಚ್ಚಲು ಡಿವಿಆರ್ ಪರಿಶೀಲಿಸಬೇಕಾಗಿದೆ. ಡಿವಿಆರ್ ಉಳಿದುಕೊಂಡಿದ್ದು ಬ್ರಹ್ಮಾವರ ಪೊಲೀಸರು ಪರಿಶೀಲನೆಗೆ ಕೊಂಡು ಹೋಗಿದ್ದಾರೆ. ಬೆಂಕಿ, ಹೊಗೆ ಭೀತಿ ಹುಟ್ಟಿಸುವ ರೀತಿಯಲ್ಲಿ ಆವರಿಸಿಕೊಂಡಿತ್ತು.

ಎ ಅಕ್ಷತಾ ಪುಸ್ತಕ ಭಂಡಾರದ ಸಿಬ್ಬಂದಿ ಬೆಂಕಿ ತಗುಲಿದ್ದನ್ನು ಗಮನಿಸಿ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಕ್ಷಣ ಅಗ್ನಿಶಾಮಕ ಠಾಣೆಗಳಿಗೆ ಸಂಪರ್ಕಿಸಿದ್ದರು. ಮಾಹಿತಿ ಸಿಕ್ಕಿದ ತಕ್ಷಣ ಅಗ್ನಿಶಾಮಕ ಘಟಕಗಳ ಸಿಬ್ಬಂದಿಗಳು ಆಗಮಿಸಿ ಮೊದಲು ಅಂಗಡಿಗಳಿಗೆ ಬೆಂಕಿ ತಗಲುವುದನ್ನು ತಪ್ಪಿಸಿದ್ದರಿಂದ ಸಾಲು ಸಾಲು ಅಂಗಡಿಗಳು ಉಳಿದುಕೊಂಡಿವೆ. ಉಪ್ಪಿನಕೋಟೆಯ ಜೆಎಂಜೆ ಟ್ಯಾಂಕರ್ ನವರು ಅಗ್ನಿಶಾಮಕ ವಾಹನಗಳಿಗೆ ಸುಮಾರು 15 ಟ್ಯಾಂಕರ್ ನೀರನ್ನು ಒದಗಿಸಿದರು. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಳಿಗ್ಗೆಯ ವರಗೂ ಬೆಂಕಿ ನಂದಿಸುತ್ತಲೇ ಇದ್ದಾರೆ. ಎಸ್‌ಎಲ್‌ಆರ್‌ಆರ್ ಎಂ ಘಟಕದೊಳಗಿರುವ ರಾಶಿ ರಾಶಿ ಕಸಕ್ಕೆ ಬೆಂಕಿ ಹೊತ್ತಿ ಉರಿದಿತ್ತು.

ರಾತ್ರಿಯೇ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಗ್ರಾಮ ಪಂಚಾಯತ್ ಸದಸ್ಯರಾದ ನಿರಂಜನ್ ಶೆಟ್ಟಿ, ದೇವಾನಂದ ನಾಯಕ್, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ, ಪಿ.ಎಸ್.ಐ. ರಾಘವೇಂದ್ರ, ಎಎಸ್‌ಐ ಶಾಂತರಾಜ್, ನಾರಾಯಣ ಗೌಡ, ಗೃಹ ರಕ್ಷಕ ದಳದ ಪಿಎಲ್ ಸಿ ಸ್ಟೀವನ್ ಪ್ರಕಾಶ್ ಲೂವಿಸ್ ಎಸ್.ಎಲ್.ಆರ್.ಎಂ.ಘಟಕದ ಮೇಲ್ವಿಚಾರಕ ಸಂತೋಷ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶೇಖರ್ ನಾಯ್ಕ್, ಸಾಮಾಜಿಕ ಕಾರ್ಯಕರ್ತ ಅಜ್ಮಲ್ ಅಸಾದಿ ಸೇರಿದಂತೆ ಸ್ಥಳಿಯ ಅನೇಕರು ಬೆಂಕಿ ನಂದಿಸಲು ಸಹಕರಿಸಿದರು.

ಅಲ್ತಾಫ್ ಮಟಪಾಡಿ ಜೆಸಿಬಿ ಒದಗಿಸಿದರು. ಜಿಲ್ಲಾ ಅಗ್ನಿಶಾಮಕ ಆಧಿಕಾರಿ ವಿನಾಯಕ ಕಲ್ಗುಟಕರ್, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್, ಮಲ್ಪೆ ಅಗ್ನಿಶಾಮಕ ಠಾಣಾಧಿಕಾರಿ ಮಹಮ್ಮದ್ ಶಫಿ ಮೂರು ಠಾಣೆಗಳ ಪ್ರಮುಖ ಅಗ್ನಿಶಾಮಕರು ಹಾಗೂ ಸಿಬ್ಬಂದಿಗಳು ಬೆಂಕಿನಂದಿಸಲು ಹರ ಸಾಹಸ ಪಟ್ಟರು. ಬ್ರಹ್ಮಾವರ ಪೋಲೀಸರು ಎಲ್ಲಾ ಅಂಗಡಿ ಮಾಲಕರಿಗೆ ರಾತ್ರಿಯೇ ಸುದ್ದಿ ಮುಟ್ಟಿಸಿದ್ದರಿಂದ ರಾತ್ರಿಯೂ ಸಾಕಷ್ಟು ಜನರು ಸೇರಿದ್ದರು.