ಡೈಲಿ ವಾರ್ತೆ: 02/ಮಾರ್ಚ್ /2025

ಉಡುಪಿ|ಚಿತ್ರರಂಗ ಸತ್ತು ಹೋಯ್ತು, ಊಟ ಇಲ್ಲ ಅಂತಾರೆ: ಮತ್ತೆ ಸಿನಿಮಾ ಮಂದಿ ಮೇಲೆ ಗುಡುಗಿದ ಉಪಮುಖ್ಯ ಮಂತ್ರಿ ಡಿಕೆಶಿ

ಉಡುಪಿ; 16ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ವೇಳೆ ಕನ್ನಡ ಚಿತ್ರರಂಗದವರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಎಚ್ಚರಿಕೆ ನೀಡಿದ್ದರು. ಅವರ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಂದು ಮಾ. 2 ರಂದು ಮತ್ತೆ ಡಿಕೆ ಶಿವಕುಮಾರ್​ ಗುಡುಗಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಫಿಲ್ಮ್ ಫೆಸ್ಟಿವಲ್​ ಉದ್ಘಾಟನೆಯಲ್ಲಿ ಚಿತ್ರರಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಬಾರದೇ ಇರುವುದನ್ನು ಅವರು ಖಂಡಿಸಿದರು.

ನಿಮ್ಮ ಹೇಳಿಕೆಯಿಂದ ಸಿನಿಮಾದವರು ಬೇಸರಗೊಂಡಿದ್ದಾರಲ್ಲ ಎಂದು ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ‘ಸಿನಿಮಾದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ. ನಮ್ಮ ನೀರು, ನಮ್ಮ ಹಕ್ಕು. ಅವರು ಯಾವಾಗಲೂ ನೆಲ, ಜಲದ ವಿಚಾರಕ್ಕೆ ಪಕ್ಷಾತೀತವಾಗಿ ಸಹಕಾರ ನೀಡುತ್ತೇವೆ ಅಂತ ಹೇಳುತ್ತಿದ್ದರು. ಆದರೆ ಮೇಕೆದಾಟು ಯಾತ್ರೆಗೆ ಯಾರೂ ಬರಲಿಲ್ಲ’ ಎಂದಿದ್ದಾರೆ ಡಿಕೆ ಶಿವಕುಮಾರ್.

‘ಮೇಕೆದಾಟು ಯಾತ್ರೆಗೆ ಬಂದು ಪ್ರೇಮ್ ಕೇಸ್ ಹಾಕಿಸಿಕೊಂಡ. ಬಿಜೆಪಿಯವರು ಅವನ ಮೇಲೆ ಕೇಸ್ ಹಾಕಿದರು. ದುನಿಯಾ ವಿಜಯ್ ಮತ್ತು ಸಾಧು ಕೋಕಿಲ ಮೇಲೂ ಕೇಸ್ ಹಾಕಿದರು. ಬೇಕಿದ್ದರೆ ನಮ್ಮ ಮೇಲೆ ಕೇಸ್ ಹಾಕಿಕೊಳ್ಳಲಿ. ನಿನ್ನೆ ನಡೆದ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮ ನನ್ನದಾ? ಚಿತ್ರರಂಗದ್ದು. ಆದಕ್ಕೆ ಅನೇಕರು ಬಂದಿಲ್ಲ. ಫಿಲ್ಮ್ ಇಂಡಸ್ಟ್ರಿ ಸತ್ತು ಹೋಯ್ತು, ಚಿತ್ರಮಂದಿರಗಳೆಲ್ಲ ಮುಚ್ಚಿ ಹೋಯ್ತು, ಊಟ ಇಲ್ಲ ಅಂತೆಲ್ಲ ಚಿತ್ರರಂಗದವರು ಮಾತನಾಡುತ್ತಾರೆ. ಆದರೆ ಫಿಲ್ಮ್ ಫೆಸ್ಟಿವಲ್​ ಗೆ ಅವರ ಪ್ರೋತ್ಸಾಹ ಇಲ್ಲ. ಹಾಗಾದ್ರೆ ಅಂತಾರಾಷ್ಟ್ರೀಯ ಚಿತ್ರೋತ್ಸವನ್ನು ಸರ್ಕಾರ ಯಾರಿಗಾಗಿ ಮಾಡುತ್ತಿದೆ’ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.