ಡೈಲಿ ವಾರ್ತೆ: 04/ಮಾರ್ಚ್ /2025

ಮಂಜೇಶ್ವರ| ಭೀಕರ ರಸ್ತೆ ಅಪಘಾತ – ಮೂವರು ದುರ್ಮರಣ, ಓರ್ವ ಗಂಭೀರ

ಉಪ್ಪಳ| ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವನ್ನಪ್ಪಿ, ಓರ್ವ ಗಂಭೀರ ಗಾಯಗೊಂಡ ಘಟನೆ
ಮಂಜೇಶ್ವರ ಬಳಿಯ ಉಪ್ಪಳ ಬ್ರಿಡ್ಜ್ ಸಮೀಪ ಸಂಭವಿಸಿದೆ.

ಮೃತರನ್ನು ಮೂಲತಃ ಚೆರುಗೋಳಿ ತೋಟ ನಿವಾಸಿಯೂ ಪ್ರಸ್ತುತ ಮೀಂಜ ಪಂಚಾಯತ್ ವ್ಯಾಪ್ತಿಯ ಮಂಜಲ್ಲೋಡಿಯ ಜನಾರ್ದನ (58), ಪುತ್ರ ಅರುಣ್ (28), ಹೊಸಂಗಡಿ ಬಲ್ಲಂಗುಡೇಲುವಿನ ದಿ। ಭೂಪತಿ ಎಂಬವರ ಪುತ್ರ ಕೃಷ್ಣ ಯಾನೆ ಕಿಶನ್ ಕುಮಾರ್ (32) ಎಂದು ಗುರುತಿಸಲಾಗಿದೆ.
ಕರ್ನಾಟಕದ ಉಪ್ಪಿನಂಗಡಿ ನಿವಾಸಿ ರತನ್ (30) ಎಂಬವರು ಗಂಭೀರ ಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ನಾಲ್ಕು ಮಂದಿ ಕಾರಿನಲ್ಲಿ ಬಾಯಿಕಟ್ಟೆ ಭಾಗದಿಂದ ಹೊಸಂಗಡಿ ಭಾಗಕ್ಕೆ ಕೈಕಂಬ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ವಾಮಂಜೂರು ಚೆಕ್‌ಪೋಸ್ಟ್ ಬಳಿಯ ಸೇತುವೆ ಮೇಲೆ ಸಂಚರಿಸುತ್ತಿದ್ದಂತೆ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಬಳಿಕ ಸೇತುವೆಯ ಬದಿಗೆ ಬಡಿದಿರುವುದೇ ಅಪಘಾತದ ಭೀಕರತೆಗೆ ಕಾರಣವೆನ್ನಲಾಗಿದೆ. ಅಪಘಾತದಲ್ಲಿ ಕಾರು ಪೂರ್ಣ ನಜ್ಜುಗುಜ್ಜಾಗಿದ್ದು, ಸುಮಾರು 20 ಮೀಟ‌ರ್ ವ್ಯಾಪ್ತಿಯಲ್ಲಿ ಬಿಡಿಭಾಗಗಳು ಚದುರಲ್ಪಟ್ಟಿದೆ.

ಮೃತಪಟ್ಟ ಕಿಶನ್ ಕುಮಾರ್ ಚಾಲಕ ವೃತ್ತಿ ನಡೆಸುತ್ತಿದ್ದು, ಇವರನ್ನು ಕೆಲಸದ ಅಗತ್ಯಕ್ಕಾಗಿ ಮಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಈ ಅಪಘಾತವುಂಟಾಗಿದೆಯೆಂದು ಹೇಳಲಾಗುತ್ತಿದೆ.