

ಡೈಲಿ ವಾರ್ತೆ: 04/ಮಾರ್ಚ್ /2025


ಕೊಲ್ಲೂರು| ತಹಸೀಲ್ದಾರ್ ಆದೇಶ ಉಲ್ಲಂಘಿಸಿ ಸರ್ಕಾರಿ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ: ಪೊಲೀಸರಿಗೆ ದೂರು

ಕೊಲ್ಲೂರು: ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಕಂದಾಯ ನಿರೀಕ್ಷಕರಾದ ರಾಘವೇಂದ್ರ ಡಿ ಅವರು ಹೀಗೆಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿರುವ ರಾಘವೇಂದ್ರ ಡಿ ಅವರಿಗೆ ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿ ಮಂಜುಳ ಎಂಬುವವರು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಈ ಮೇರೆಗೆ ಅವರು ದಿನಾಂಕ 23/12/2024 ರಂದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದಾಗ ಮಂಜುಳ ಎಂಬವರು ಅವರ ಪಟ್ಟಾ ಜಾಗ ಸರ್ವೆ ನಂಬ್ರ 56/11 ರಲ್ಲಿ ಮನೆ ಕಟ್ಟಲು ಅನುಮತಿ ಪಡೆದುಕೊಂಡು ಅನುಮತಿ ಪಡೆದ ಜಾಗದಲ್ಲಿ ಮನೆ ಕಟ್ಟದೇ ಹತ್ತಿರದ ಸರ್ವೆ ನಂಬ್ರ 141/ * ರಲ್ಲಿ 0.05 ಸರಕಾರಿ ಜಾಗದಲ್ಲಿ ಇಡೂರು ಪಂಚಾಯತ್ ಸದಸ್ಯ ಅಶೋಕ ಶೆಟ್ಟಿಯವರ ಮುಖೇನ ಮನೆ ಕಟ್ಟುತ್ತಿದ್ದುದು ತಿಳಿದುಬಂದಿತ್ತು. ಈ ಬಗ್ಗೆ ವರದಿ ಸಲ್ಲಿಸಲಾಗಿ, ಕುಂದಾಪುರ ತಹಶೀಲ್ದಾರರು ಮನೆ ಕಾಮಗಾರಿ ನಿಲ್ಲಿಸುವಂತೆ ನೋಟೀಸ್ ನೀಡಿದ್ದರು. ಅವರ ಆದೇಶವನ್ನು ಉಲ್ಲಂಘನೆ ಮಾಡಿ, ಮನೆ ನಿರ್ಮಾಣವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.
ಇದೀಗ ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.