ಡೈಲಿ ವಾರ್ತೆ: 09/ಮಾರ್ಚ್ /2025

ಹಂಪಿ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ: ಮೂರನೇ ಆರೋಪಿ ಬಂಧನ

ಕೊಪ್ಪಳ: ಹಂಪಿ ಸಮೀಪ ಇತ್ತೀಚೆಗೆ ನಡೆದಿದ್ದ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ತಿಳಿಸಿದ್ದಾರೆ.

ಮಾರ್ಚ್ 6 ರಂದು ತುಂಗಭದ್ರ ಎಡದಂಡೆ ಕಾಲುವೆ ಬಳಿ ತಡರಾತ್ರಿಯವರೆಗೆ ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಇಸ್ರೇಲಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.

ಅಲ್ಲದೆ ಈ ವೇಳೆ ಸ್ಥಳದಲ್ಲಿದ್ದ ಇತರೆ ಮೂರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದರು. ಈ ಪೈಕಿ ನಾಪತ್ತೆಯಾಗಿದ್ದ ಪ್ರವಾಸಿಯ ಶವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಪತ್ತೆಯಾಗಿದೆ. ಮೃತನನ್ನು ಒರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದರು.

ಈ ಪೈಶಾಚಿಕ ಕೃತ್ಯದಲ್ಲಿ ಮೂವರು ವ್ಯಕ್ತಿಗಳು ಭಾಗಿಯಾಗಿದ್ದು, ಮಾರ್ಚ್ 8 ರಂದು ಇಬ್ಬರನ್ನು ಬಂಧಿಸಿದರೆ, ಮೂರನೇ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಪ್ರವಾಸಿಗರಿಗೆ ಭದ್ರತೆ ಹೆಚ್ಚಿಸುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಶಿವರಾಜ ತಂಗಡಗಿ ತಿಳಿಸಿದರು.