


ಡೈಲಿ ವಾರ್ತೆ: 10/ಮಾರ್ಚ್ /2025


ದಿಗಂತ್ ನಾಪತ್ತೆ ಪ್ರಕರಣದಲ್ಲಿ ಕೋಮು ಸಂಘರ್ಷಕ್ಕೆ ಯತ್ನ: ಭರತ್ ಶೆಟ್ಟಿ, ಹರೀಶ್ ಪೂಂಜಾ ವಿರುದ್ಧ ಸುಮೋಟೋ ಕೇಸ್ ದಾಖಲಿಸಲು ಜಿಲ್ಲಾ ಎಸ್ಪಿಗೆ ಮನವಿ
ಮಂಗಳೂರು: ದಿಗಂತ್ ನಾಪತ್ತೆ ಪ್ರಕರಣದಲ್ಲಿ ಕೋಮು ಸಂಘರ್ಷಕ್ಕೆ ಯತ್ನಿಸಿದ ಶಾಸಕ ಭರತ್ ಶೆಟ್ಟಿ, ಹರೀಶ್ ಪೂಂಜಾ ಸಹಿತ ಸಂಘಪರಿವಾರದ ಪ್ರಮುಖರ ಮೇಲೆ ಸುಮೋಟೋ ಕೇಸ್ ದಾಖಲಿಸಲು ಆಗ್ರಹಿಸಿ ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗದಿಂದ ಜಿಲ್ಲಾ ಎಸ್ಪಿಗೆ ಮನವಿ ಮಾಡಿದೆ.
ಪೊಲೀಸ್ ಇಲಾಖೆಯ ಶ್ರಮದ ಕಾರಣ ಯುವಕ ದಿಗಂತ್ನ ಸುರಕ್ಷಿತ ಪತ್ತೆಯ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ ನಾಪತ್ತೆ ವಿಚಾರ ಬಹಿರಂಗಗೊಂಡ ತಕ್ಷಣ ಬಜರಂಗ ದಳ ಸಹಿತ ಸಂಘ ಪರಿವಾರದ ಸಂಘಟನೆಗಳು ಹಾಗೂ ಬಿಜೆಪಿಯ ಪ್ರಮುಖರು, ಪ್ರಕರಣಕ್ಕೆ ಕೋಮು ಬಣ್ಣ ಬಳಿದು ಎರಡು ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ ಯತ್ನ ನಡೆಸಿದ್ದಾರೆ. ಪ್ರಕರಣದ ತನಿಖೆಗೆ ಅವಕಾಶ ನೀಡದೆ ಮತೀಯತೆ ಆಧಾರದಲ್ಲಿ ಪ್ರತಿಭಟನೆ, ಬಂದ್ ನಡೆಸಿ ಪೊಲೀಸ್ ಇಲಾಖೆಯನ್ನು ಒತ್ತಡಕ್ಕೆ ಸಿಲುಕಿಸಲಾಗಿದೆ. ಪೊಲೀಸ್ ಇಲಾಖೆಯನ್ನು ಕ್ರಿಮಿನಲ್ ಸಮುದಾಯದ ಪಕ್ಷಪಾತಿಗಳು ಎಂದು ಆರೋಪಿಸಲಾಗಿದೆ. ಬಿಜೆಪಿ ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಜಾ ಹಾಗೂ ಸಂಘ ಪರಿವಾರದ ಸ್ಥಳೀಯ ನಾಯಕರು ದ್ವೇಷ ಭಾಷಣ ಮಾಡಿದ್ದಾರೆ. ಇದು ನೆಲದ ಕಾನೂನು ಹಾಗೂ ಸಂವಿಧಾನದ ಜಾತ್ಯತೀತ ಆಶಯ, ನಿಯಮಗಳಿಗೆ ವಿರುದ್ಧವಾಗಿದೆ. ಕೋಮು ಸೂಕ್ಷಮ ಪ್ರದೇಶಗಳು ಎಂದು ಗುರುತಿಸಲಾಗಿರುವ ಫರಂಗಿಪೇಟೆ, ಬಂಟ್ವಾಳ, ಮಂಗಳೂರಿನಲ್ಲಿ ಇಂತಹ ನಡೆಗಳು ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಸಾದ್ಯತೆ ಇದೆ. ಹಾಗಾಗಿ ಪ್ರಚೋದನಾಕಾರಿ ಭಾಷಣ ಮಾಡಿದ ಶಾಸಕ ಭಾರತ ಶೆಟ್ಟಿ, ಹರೀಶ್ ಪೂಂಜಾ ಹಾಗೂ ಬಜರಂಗದಳದ ಭರತ್ ಕುಮ್ಡೇಲು ಮತ್ತಿತರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಣೆಯಿಂದ ಮೊಕ್ಕದ್ದಮೆ ಹೂಡಬೇಕು ಎಂದು ನಿಯೋಗವು ಮನವಿಯಲ್ಲಿ ಆಗ್ರಹಿಸಿದೆ.