ಡೈಲಿ ವಾರ್ತೆ: 10/ಮಾರ್ಚ್ /2025

ಫರಂಗಿಪೇಟೆ| ದಿಗಂತ್ ನಾಪತ್ತೆ ಪ್ರಕರಣ ಸುಖಾಂತ್ಯ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಪೀಕರ್ ಗೆ ಅಭಿನಂದನೆ – ಉಮರ್ ಫಾರೂಕ್

ಬಂಟ್ವಾಳ: ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ಪಿಯುಸಿ ವಿದ್ಯಾರ್ಥಿ ದಿಗಂತ್ ನಿಗೂಢ ನಾಪತ್ತೆ ಪ್ರಕರಣವು ಸುಖಾಂತ್ಯಗೊಂಡಿದ್ದು , ಕಳೆದ 13 ದಿನಗಳಿಂದ ಕಾರ್ಯಾಚರಣೆ ನಡೆಸಿ, ದಿಗಂತ್ ನನ್ನು ಪತ್ತೆ ಹಚ್ಚಲು ಶ್ರಮಿಸಿದ ಪೊಲೀಸ್ ಇಲಾಖೆ, ಹಾಗೂ ಸೂಕ್ತ ಸಲಹೆ, ನಿರ್ದೇಶನ ನೀಡಿದ ಸ್ಥಳೀಯ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದ.ಕ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಅಭಿನಂದನೆ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ದಿಗಂತ್ ನಾಪತ್ತೆ ಬಳಿಕ‌ ಬಹಳಷ್ಟು ಊಹಾಪೋಹ ಸುದ್ದಿಗಳು ಹಬ್ಬಿದ್ದವು. ಇದಕ್ಕೆಲ್ಲ ಪೊಲೀಸ್ ಇಲಾಖೆ ಸ್ಪಷ್ಟವಾದ ಉತ್ತರ ನೀಡಿದ್ದು, ದಿಗಂತ್ ಉಡುಪಿಯಲ್ಲಿ ಜೀವಂತ ಪತ್ತೆಯಾಗಿದ್ದು, ಕುಟುಂಬದವರಿಗೆ ಹಾಗೂ ನಾಗರಿಕರು ತುಂಬಾ ಸಂತೋಷಪಟ್ಟಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ನಾಪತ್ತೆ ಪ್ರಕರಣದಲ್ಲಿ ಕೆಲವರು ರಾಜಕೀಯ ಮಾಡಲು ಪ್ರಯತ್ನ ಪಟ್ಟಿದ್ದಾರೆ ಆದರೆ ಅವರ ಪ್ರಯತ್ನ ವಿಫಲವಾಗಿದೆ, ಫರಂಗಿಪೇಟೆ ಬಂದ್‌ ನೆಪದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನ ನಡೆಸಲಾಗಿದೆ, ಪ್ರತಿಭಟನೆ ಸಂದರ್ಭ ಒಂದಿಬ್ಬರು ಪ್ರಕರಣವನ್ನು ಧರ್ಮಾಧಾರಿತವಾಗಿ ಮುಸ್ಲಿಂ ರೈ ತಲೆಗೆ ಕಟ್ಟಲು ಪ್ರಯತ್ನ ಪಟ್ಟಿದ್ದರು, ಆದರೆ ಈ ಪರಿಸರದ ಶಾಂತಿಪ್ರಿಯ ನಾಗರಿಕರು ಅದಕ್ಕೆ ಯಾವುದಕ್ಕೂ ಅವಕಾಶ ನೀಡದೆ ದಿಗಂತ್ ನಮ್ಮ ಮನೆ ಮಗ ಎಂದು ಭಾವಿಸಿ ಜಾತಿ, ಧರ್ಮ ಬಿಟ್ಟು ಸ್ವಯಂ ಪ್ರೇರಿತರಾಗಿ ಪ್ರತಿಭಟನಾ ಸಂದರ್ಭದಲ್ಲಿ ಎಲ್ಲರೂ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಸಹಕರಿಸಿದರು ಎಂದರು.

ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ‌ ರಮ್ಲಾನ್ ಮಾರಿಪಳ್ಳ ಮಾತನಾಡಿ, ದಿಗಂತ್ ಜೀವಂತವಾಗಿ ಮರಳಿರುವುದು ಗ್ರಾಮದ ಜನರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಮ್ಮೆಮಾರ್ ಪರಿಸರದಲ್ಲಿ ಮುಸ್ಲಿಮ್ ಸಮುದಾಯದ ಜನಸಂಖ್ಯೆ ಅಧಿಕವಾಗಿದ್ದರೂ ಹಿಂದೂ ಬಾಂಧವರ ಜೊತೆ ಉತ್ತಮ ಬಾಂಧವ್ಯ ಹಾಗೂ ಸೌಹಾರ್ದತೆಯಿಂದ ಇದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಮಾಜಿ ಉಪಾಧ್ಯಕ್ಷ ಮುಹಮ್ಮದ್ ಪೇರಿಮಾರ್, ಸದಸ್ಯ ಇಶಾಮ್ ಫರಂಗಿಪೇಟೆ, ರಝಾಕ್ ಅಮೆಮ್ಮಾರ್, ಕುಂಪನಮಜಲು ಅರಫಾ ಜುಮ್ಮಾ ಮಸೀದಿ ಅಧ್ಯಕ್ಷ ಬುಕಾರಿ, ಬಶೀರ್ ತಂಡೆಲ್ ಉಪಸ್ಥಿತರಿದ್ದರು.