ಡೈಲಿ ವಾರ್ತೆ: 11/ಮಾರ್ಚ್ /2025

ಕೊಪ್ಪಳ| ಗ್ಯಾಂಗ್‌ರೇಪ್ ಪ್ರಕರಣ – ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಕೊಪ್ಪಳ: ವಿದೇಶಿ ಮಹಿಳೆ ಮತ್ತು ಹೋಮ್‌ಸ್ಟೇ ಮಾಲೀಕೆ ಮೇಲೆ ಗ್ಯಾಂಗರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೊಪ್ಪಳ ಗಂಗಾವತಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಆರೋಪಿಗಳಾದ ಮಲ್ಲೇಶ್, ಚೇತನಸಾಯಿ, ಶರಣಬಸವನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಸೋಮವಾರ ರಾತ್ರಿ ಮೂವರು ಆರೋಪಿಗಳನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮೂವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಕೊಪ್ಪಳ ಜೈಲಿಗಟ್ಟಿದ್ದಾರೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪೂರ ಕೆರೆ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದಲ್ಲಿ ಕುಳಿತುಕೊಂಡು ನಕ್ಷತ್ರ ವೀಕ್ಷಿಸುತ್ತಿದ್ದ 5 ಜನ ವಿದೇಶಿ ಪ್ರವಾಸಿಗರ ಮೇಲೆ ಗುರುವಾರ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಮೂವರು ಪುರುಷರನ್ನು ಕೆರೆಗೆ ತಳ್ಳಿ, ಇಬ್ಬರು ಮಹಿಳಾ ಪ್ರವಾಸಿಗರ ಮೇಲೆ ಅತ್ಯಾಚಾರವೆಸಗಿದ್ದರು.