ಡೈಲಿ ವಾರ್ತೆ: 11/ಮಾರ್ಚ್ /2025

ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಗೃಹ ಇಲಾಖೆ ಆದೇಶ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾಳಿಂದ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಡಿಜಿಪಿ ರಾಮಚಂದ್ರ ರಾವ್‌ಗೆ ಮಗಳಿಂದ ಸಂಕಷ್ಟ ಶುರುವಾಗಿದೆ. ಮಗಳಿಂದ ಇದೀಗ ತಂದೆಗೂ ಸಹ ವಿಚಾರಣೆ ಭಾಗ್ಯ ಬಂದೊದಗಿದೆ.

ಐಎಎಸ್ ಅಧಿಕಾರಿ ಗೌರವ್ ಗುಪ್ತ ನೇತೃತ್ವದಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಮಚಂದ್ರರಾವ್‌ಗೆ ಕೊಟ್ಟಿದ್ದ ಪ್ರೋಟೋಕಾಲ್‌ಗಳನ್ನು ದುರುಪಯೋಗ ಪಡಿಸಿಕೊಂಡು ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಅಕ್ರಮ ಅಪರಾಧ ಎಸಗಿರುವ ಆರೋಪ ಇದೆ.

ಸದ್ಯ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ‌ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಮಚಂದ್ರರಾವ್ ಅವರನ್ನು ತನಿಖೆ ನಡೆಸುವುದು ಅಗತ್ಯವೆಂದು ಸರ್ಕಾರ ಪರಿಗಣಿಸಿದೆ. ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ಮತ್ತು ನೆರವನ್ನು ನೀಡಲು ಡಿಜಿಐಜಿಪಿ ಅಲೋಕ್ ಮೋಹನ್‌ಗೆ ಸೂಚನೆ ನೀಡಲಾಗಿದ್ದು, ತನಿಖೆ ನಡೆಸಿ ಒಂದು ವಾರದಲ್ಲಿ ವರದಿಯನ್ನು‌ ಸರ್ಕಾರಕ್ಕೆ ಸಲ್ಲಿಸಲು ಖಡಕ್ ಸೂಚನೆ ನೀಡಲಾಗಿದೆ.
ಇದಲ್ಲದೇ‌, ಪೊಲೀಸ್ ಸಿಬ್ಬಂದಿ ಪ್ರೋಟೋಕಾಲ್ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಸಹ ಸರ್ಕಾರ ಆದೇಶ ನೀಡಿದೆ. ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಇದರಿಂದ ಸಂಕಷ್ಟ ಎದುರಾಗಿದೆ. ಓರ್ವ ಪ್ರೋಟೋಕಾಲ್‌ನ ಹೆಡ್ ಕಾನ್‌ಸ್ಟೇಬಲ್, ಇನ್ನೊಬ್ಬ ಗುಪ್ತಚರ ಇಲಾಖೆ ಕಾನ್‌ಸ್ಟೇಬಲ್ ಆಗಿದ್ದರು. ರನ್ಯಾ ರಾವ್ ಏರ್‌ಪೋರ್ಟ್‌ಗೆ ಬಂದಾಗ ಪಾಳಿಯಲ್ಲಿ ಈ ಇಬ್ಬರೂ ಇದ್ದರು. ಪ್ರೋಟೋಕಾಲ್‌ ಕಾನ್‌ಸ್ಟೇಬಲ್ ಕರೆದ ಅಂತ ಗುಪ್ತಚರ ಇಲಾಖೆಯ ಅಧಿಕಾರಿಯೂ ರನ್ಯಾ ರಾವ್ ಭೇಟಿಗೆ ಹೋಗಿದ್ದರು. ಹೀಗಾಗಿ, ಇಬ್ಬರಿಗೂ ಕೂಡ ವಿಚಾರಣೆಯ ಬಿಸಿ ತಟ್ಟಿದೆ.