


ಡೈಲಿ ವಾರ್ತೆ: 15/ಮಾರ್ಚ್ /2025


ಕಾಡಾನೆ ದಾಳಿಗೆ ಮಹಿಳೆ ಸಾವು: 2 ತಿಂಗಳಲ್ಲಿ 4 ಮಂದಿಯನ್ನು ಬಲಿ ಪಡೆದ ಪುಂಡಾನೆ

ಹಾಸನ: ಕಾಡಾನೆ ದಾಳಿಗೆ ಬೇಲೂರು ತಾಲೂಕಿನಲ್ಲಿ ಮತ್ತೊಬ್ಬ ಮಹಿಳೆ ಬಲಿಯಾಗಿದ್ದು, ಕಳೆದ 2 ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ 4ನೇ ಘಟನೆ ಇದಾಗಿದೆ. ಜಿಲ್ಲೆಯ ಬೇಲೂರು ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದೆ.
ಸುಶೀಲಮ್ಮ (63) ಮೃತ ಮಹಿಳೆ.
2 ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ನಾಲ್ಕನೇ ಬಲಿ ಆಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಸೊಂಡಲಿನಿಂದ ಮಹಿಳೆಯನ್ನು ಎತ್ತಿ ಬಿಸಾಡಿ, ಕಾಲಿನಿಂದ ತಲೆಯನ್ನು ತುಳಿದು ಸಾಯಿಸಿದೆ. ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ಚೀಕನಹಳ್ಳಿ-ಬೇಲೂರು ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಕಾಡಾನೆ ಹಾವಳಿ ನಿಯಂತ್ರಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಅರಣ್ಯ ಸಚಿವರು ಆಗಮಿಸುವಂತೆ ಆಗ್ರಹಿಸಿದರಲ್ಲದೇ, ಅರಣ್ಯ ಸಚಿವರು ಬರುವವರೆಗೂ ಶವ ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಟನೆ ವೇಳೆ ಸಾರಿಗೆ ಬಸ್ ಚಾಲನೆಗೆ ಮುಂದಾದ ಚಾಲಕನ ವಿರುದ್ಧ ಹರಿಹಾಯ್ದ ಪ್ರತಿಭಟನಾಕಾರರು ಬಸ್ ಮುಂದೆ ಹೋಗದಂತೆ ತಡೆದು ಟೈರ್ಗೆ ಬೆಂಕಿ ಹಚ್ಚಿ ರಸ್ತೆಯಲ್ಲಿ ಧರಣಿ ಕುಳಿತು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.