ಡೈಲಿ ವಾರ್ತೆ: 16/ಮಾರ್ಚ್ /2025

ತೊಗರಿ ಬೇಳೆ ಸೇವಿಸುವ ಮುನ್ನ ಎಚ್ಚರ: ಕ್ಯಾನ್ಸರ್​ ಕಾರಕ ಅಂಶ ಪತ್ತೆ.!

ಯುಗಾದಿ ಹಬ್ಬ ಸಮೀಪಿಸುತ್ತಿದ್ದು, ತೊಗರಿ ಬೇಳೆ ಹೋಳಿಗೆ ಸವಿಯಬೇಕು ಎನ್ನುವವರಿಗೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ತೊಗರಿ ಬೇಳೆಗೆ ರಾಸಾಯನಿಕ ಬಣ್ಣ ಮಿಶ್ರಿತ ಕೇಸರಿ ಬೇಳೆ ಮಿಶ್ರಣ ಆಗುತ್ತಿರುವುದು ಪತ್ತೆಯಾಗಿದೆ. ಕೇಸರಿ ಬೇಳೆ ಮಿಶ್ರಿತ ತೊಗರೆ ಬೇಳೆ ಸೇವನೆಯಿಂದ ಪಾರ್ಶ್ವವಾಯು, ಅಂಗವೈಕಲ್ಯತೆಗೆ ಕಾರಣವಾಗಬಲ್ಲ ಗಂಭೀರ ನರರೋಗ, ಕ್ಯಾನ್ಸರ್​ ಉಂಟಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಕೇಸರಿ ಬೇಳೆ ಬಣ್ಣ, ಆಕಾರದಲ್ಲಿ ತೊಗರಿ ಬೇಳೆಯನ್ನೇ ಹೋಲುತ್ತದೆ. ಕೇಸರಿ ಬೇಳೆ ವಿಷಕಾರಿ ಅಂಶಗಳಿಂದ ಕೂಡಿರುತ್ತದೆ. ಇದು ಒಂದು ಕಳೆಯ ಬೆಳೆಯಾಗಿದ್ದು, ಕಾಡಿನಲ್ಲಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶದಲ್ಲಿ ಕೇಸರಿ ಬೇಳೆ ಬೆಳೆಯಲಾಗುತ್ತದೆ. ಕೇಸರಿ ಬೇಳೆಯನ್ನು ನಿರಂತರವಾಗಿ ಸೇವಿಸುವುದರಿಂದ ವ್ಯಕ್ತಿಯು ಲೆಥರಿಸಂ ಕಾಯಿಲೆಗೆ ತುತ್ತಾಗುತ್ತಾನೆ. ಎರಡೂ ಕಾಲುಗಳ ನರ ಹಾಗೂ ಮಾಂಸಕಂಡಗಳ ಮೇಲೆ ಸರಿಪಡಿಸಲಾಗದ ನ್ಯೂನತೆ ಉಂಟಾಗುತ್ತವೆ. ಶಾಶ್ವತ ಅಂಗವೈಕಲ್ಯ ಉಂಟಾಗುವ ಸಾಧ್ಯತೆ ಇದೆ. ಇದರ ಪಾರ್ಶ್ವ ಪರಿಣಾಮ ಹೆಚ್ಚಾದಾಗ ಪಾರ್ಶ್ವವಾಯು ಸಹ ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಜೇನು ತುಪ್ಪದಲ್ಲೂ ರಾಸಾಯನಿಕ ಬಣ್ಣ?
ಇನ್ನು, ಜೇನು ತಪ್ಪದಲ್ಲೂ ರಾಸಾಯನಿಕ ಬಣ್ಣ ಬಳಕೆ ಬಗ್ಗೆ ದೂರುಗಳು ಬಂದಿವೆ. ಹಾಗಾಗಿ ರಾಜ್ಯಾದ್ಯಂತ ಮಾರಾಟ ಆಗುತ್ತಿರುವ ವಿವಿಧ ಜೇನಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪೇಪರ್ ಲೋಟದಿಂದ ಕ್ಯಾನ್ಸರ್:
ಆಹಾರ ಇಲಾಖೆ ಪೇಪರ್ ಲೋಟಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಅವುಗಳ ಬಳಕೆಯಿಂದ ಕ್ಯಾನ್ಸರ್ ಬರುವ ಅಂಶ ಪತ್ತೆಯಾಗಿದೆ. ಪೇಪರ್ ಲೋಟದಲ್ಲಿ ಶೇಕಡಾ 20 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ, ಅವುಗಳಲ್ಲಿ ಬಿಸಿಯಾದ ಟೀ, ಕಾಫಿ ಹಾಕಿದ್ರೆ ಪ್ಲಾಸ್ಟಿಕ್‌ ಕರಗುತ್ತದೆ. ಕರಗಿದ ಪ್ಲಾಸ್ಟಿಕ್ ಅಂಶ ಮನುಷ್ಯನ ದೇಹ ಸೇರಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಅತೀ ಹೆಚ್ಚು. ಹೀಗಾಗಿ ಪ್ಲಾಸ್ಟಿಕ್ ಅಂಶ ಇಲ್ಲದ ಕಪ್​​ಗಳ ಬಳಕೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ತಿಳಿಸಿದೆ.