ಡೈಲಿ ವಾರ್ತೆ: 16/ಮಾರ್ಚ್ /2025

ಮಧ್ಯರಾತ್ರಿ ಹೊಡೆದಾಡಿಕೊಂಡ ಚಿತ್ರದುರ್ಗದ ಪಿಎಸ್ಐ-ಬಿಜೆಪಿ ನಾಯಕ

ಚಿತ್ರದುರ್ಗ: ಚಿತ್ರದುರ್ಗ ನಗರ ಪೊಲೀಸ್ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮತ್ತು ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ನಿನ್ನೆ ಶನಿವಾರ ಮಧ್ಯರಾತ್ರಿ 12 ಗಂಟೆ ಸುಮಾರಗೆ ಚಿತ್ರದುರ್ಗದ ಆರ್‌ಟಿಒ ಕಚೇರಿ ಬಳಿಯ ಹೋಟೆಲ್ ಮುಂದೆ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ ನಂತರ ದೈಹಿಕ ಹಲ್ಲೆ, ಪರಸ್ಪರ ಹೊಡೆದಾಟಕ್ಕೆ ತಿರುಗಿತು.

ಘಟನೆ ವಿವರ:
ಮಧ್ಯರಾತ್ರಿ ರಸ್ತೆಯಲ್ಲಿ ಡ್ಯೂಟಿ ಮಾಡುತ್ತಿದ್ದ ಗಾದಿಲಿಂಗಪ್ಪ ಗಸ್ತು ತಿರುಗುತ್ತಿದ್ದ ವೇಳೆ ಮಧ್ಯರಾತ್ರಿ ಹೋಟೆಲ್ ಮುಂದೆ ಜನರ ಗುಂಪು ನಿಂತಿರುವುದನ್ನು ಕಂಡು ಅತ್ತ ಕಡೆ ಹೋದರು. ಈ ಮಧ್ಯರಾತ್ರಿ ಇಲ್ಲೇನು ಮಾಡುತ್ತಿದ್ದೀರಿ ಎಂದು ಗುಂಪಿನಲ್ಲಿ ನಿಂತಿದ್ದವರನ್ನು ಪಿಎಸ್ ಐ ಪ್ರಶ್ನಿಸಿದ್ದಾರೆ. ಆ ಗುಂಪಿನಲ್ಲಿ ಹನುಮಂತೇಗೌಡ ಕೂಡ ಇದ್ದರು, ಮಧುಗಿರಿ ಬಿಜೆಪಿ ಘಟಕದ ಅಧ್ಯಕ್ಷರೆಂದು ಹೇಳಿಕೊಂಡು ನೀವ್ಯಾಕೆ ನಮ್ಮನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದೀರಿ, ಸರಿಯಾಗಿ ಮಾತಾಡ್ಸಿ ಎಂದು ಹೇಳಿದ್ದಾರೆ. ಅಲ್ಲಿಂದ ಮಾತಿನ ಚಕಮಕಿ ಆರಂಭವಾಗಿ, ಕೊನೆಗೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ದಾರಿಹೋಕರು ಮತ್ತು ಹೋಟೆಲ್ ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಿದರು.

ಬಿಜೆಪಿ ನಾಯಕ ನನ್ನ ಕೆಲಸಕ್ಕೆ ಅಡ್ಡಿಬಂದರು ಎಂದು ಪಿಎಸ್ ಗಾದಿಲಿಂಗಪ್ಪ ಆರೋಪಿಸುತ್ತಾರೆ. ಹನುಮಂತೇಗೌಡ ಮಧ್ಯರಾತ್ರಿ ಇತರರೊಂದಿಗೆ ಏನು ಮಾಡುತ್ತಿದ್ದೀರ ಎಂದು ನಾನು ಪ್ರಶ್ನಿಸಿದೆ, ಅಷ್ಟಕ್ಕೆ ಸಿಟ್ಟಾಗಿ ದುರ್ವರ್ತನೆ ತೋರಿಸಿದರು ಎಂದು ಹೇಳುತ್ತಾರೆ.

ನಗರ ಪೊಲೀಸರು ತಕ್ಷಣ ಆಗಮಿಸಿ ಹನುಮಂತೇಗೌಡರನ್ನು ಬಂಧಿಸಿದರು. ಈ ಜಗಳದಲ್ಲಿ ಗಾದಿಲಿಂಗಪ್ಪ ಅವರ ಬೆರಳುಗಳಿಗೆ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಾರ್ವಜನಿಕ ಸೇವಕರೊಬ್ಬರು ಕರ್ತವ್ಯ ನಿರ್ವಹಿಸದಂತೆ ತಡೆದ ಆರೋಪದ ಮೇಲೆ ಹನುಮಂತೇಗೌಡ ವಿರುದ್ಧ ದೂರು ದಾಖಲಿಸಲಾಗಿದೆ.

ಪ್ರತಿದೂರು:
ಹನುಮಂತೇಗೌಡ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ತಮಗೆ ಎದುನೋವು ಎಂದು ಹೇಳಿಕೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ, ಸಂಸದ ಗೋವಿಂದ್ ಎಂ ಕಾರಜೋಳ ಮತ್ತು ಎಂಎಲ್‌ಸಿ ಕೆ ಎಸ್ ನವೀನ್ ನೇತೃತ್ವದ ಜಿಲ್ಲಾ ಬಿಜೆಪಿ ಘಟಕವು ಎಸ್‌ಪಿಯನ್ನು ಭೇಟಿ ಮಾಡಿ ಪಿಎಸ್‌ಐ ಗಾದಿಲಿಂಗಪ್ಪ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದೆ.