ಡೈಲಿ ವಾರ್ತೆ: 17/ಮಾರ್ಚ್ /2025

ಜೂನ್ ತಿಂಗಳಲ್ಲಿ ಹುಟ್ಟಿದ ಮಗುವಿಗೆ ಯುಕೆಜಿ ಯಿಂದ 1ನೇ ತರಗತಿಗೆ ಮುನ್ನಡೆಯಲು ಸರಕಾರ ರಿಯಾಯಿತಿ ಕೊಡಬೇಕು – ಕೋಟ ನಾಗೇಂದ್ರ ಪುತ್ರನ್

ಪುಟ್ಟ ಮಕ್ಕಳನ್ನು ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಸೇರಿಸಲು ಈಗ ಇರುವ ಸರ್ಕಾರಿ ನಿಯಮಗಳಿಂದ ಪೋಷಕರಿಗೆ ಬಹು ತೊಂದರೆಯಾಗುತ್ತಿದೆ ಎಂಬ ಬಗ್ಗೆ ಕೋಟ ನಾಗೇಂದ್ರ ಪುತ್ರನ್ ಗಮನ ಸೆಳೆದಿದ್ದಾರೆ. ಅಲ್ಲದೆ ಇಂದು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಈ ಅವೈಜ್ಞಾನಿಕ ನಿಯಮಗಳಿಂದಾಗಿ ನರ್ಸರಿ, ಎಲ್ ಕೆ ಜಿ, ಯಕೆಜಿ, ಮಕ್ಕಳು ಸತತವಾಗಿ 3ವರ್ಷಗಳ ಕಾಲ ಅಂಗನವಾಡಿಗಳಂತ ಸ್ಕೂಲ್ಗಳಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದಿದೆ.

ಅಂಗನವಾಡಿಗಳಿಂದ ಮುಂದಿನ ಒಂದನೇ ತರಗತಿಗೆ ಮುನ್ನಡೆ ಆಗಲು ಬರಿ 10, 20 ದಿನಗಳು ಕಡಿಮೆ ಇರುವ ಮಕ್ಕಳು ಪ್ರವೇಶ ಪಡೆಯಲು ಸಾಧ್ಯವಾಗದೆ, ಮಗು ಪುನಃ ಯುಕೆಜಿ ಯಲ್ಲೇ ಮುಂದುವರಿಯಬೇಕಾಗಿರುವುದು ಪೋಷಕರಲ್ಲಿ ಗೊಂದಲ ಉಂಟುಮಾಡಿದೆ.

ಜೂನ್ ಕೊನೆವರೆಗೂ ಹುಟ್ಟಿದ ಮಕ್ಕಳಿಗೆ ಒಂದನೇ ತರಗತಿ ಪ್ರವೇಶ ಕೊಡಲು ಸಾಧ್ಯವಾಗುವಂತೆ, ಸಾವಿರಾರು ಮಕ್ಕಳ ಭವಿಷ್ಯದ ದೃಷ್ಟಿಯಿಂದ, ಸರ್ಕಾರ ಗಮನಹರಿಸಿ ಸೂಕ್ತ ಕ್ರಮವಹಿಸಬೇಕು. ಪ್ರಸ್ತುತ ವರ್ತಮಾನದ ಪ್ರಕಾರ ಮಕ್ಕಳು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಈ ರೀತಿಯ ಹಿನ್ನಡೆಯಿಂದಾಗಿ ಪೋಷಕರಲ್ಲಿಯೂ ಮಕ್ಕಳ ಮನಸ್ಸಿನಲ್ಲಿಯೂ ಬೇಸರ ಮತ್ತು ಕೆಟ್ಟ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಅಂಗನವಾಡಿ, ಎಲ್ಕೆಜಿ, ಯುಕೆಜಿಗಳಲ್ಲಿ ಜೊತೆಗೆ ಇದ್ದು ತನ್ನ ಸಹಪಾಠಿ ಮಗು ಒಂದನೇ ತರಗತಿಗೆ ತೇರ್ಗಡೆ ಆಗುವಾಗ ಪ್ರಾಯದಲ್ಲಿ ಬರಿ 10, 20 ದಿನಗಳ ಅಂತರವಿರುವ ಮಗು ಮುಂದಿನ ಹಂತಕ್ಕೆ ತೇರ್ಗಡೆಯ ಅವಕಾಶ ಇಲ್ಲ ಅಂದಾಗ ಮಗುವಿನ ಮಾನಸಿಕ ಸ್ಥಿತಿ ಮತ್ತು ವಿದ್ಯಾಭ್ಯಾಸದಲ್ಲಿ ವ್ಯತ್ಯಾಸ ಆಗಬಹುದು. 2025 ನೇ ಸಾಲಿನಲ್ಲಿ ಶಾಲೆಗಳು ಶೀಘ್ರದಲ್ಲಿ ಪುನಃ ಆರಂಭವಾಗಲಿದ್ದು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪುತ್ರನ್ ಸಂಬಂಧಿತರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ನಾಯಕರು ಪಕ್ಷಾತೀತ ಚರ್ಚೆ ಮಾಡಿ ಶಿಕ್ಷಣ ಇಲಾಖಾಧಿಕಾರಿಗಳ ಗಮನ ಸೆಳೆಯಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಅವರು ವಿನಂತಿಸಿದ್ದಾರೆ.