


ಡೈಲಿ ವಾರ್ತೆ: 18/ಮಾರ್ಚ್ /2025


ವಿದ್ಯುತ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು

ಬೆಂಗಳೂರು: ರಸ್ತೆ ಕಾಮಗಾರಿ ವೇಳೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿಯಾಗಿ ವಿದ್ಯುತ್ ಕಂಬ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೈಯ್ಯಪ್ಪನಹಳ್ಳಿ ಬಳಿಯ ಸದ್ದುಗುಂಟೆಪಾಳ್ಯದಲ್ಲಿ ನಡೆದಿದೆ.
ಸದ್ದುಗುಂಟೆಪಾಳ್ಯ ನಿವಾಸಿಗಳಾದ ಸುಮತಿ(35) ಮತ್ತು ಸೋನಿ ಕುಮಾರಿ (35) ಮೃತ ದುರ್ದೈವಿಗಳು.
ಸೋಮವಾರ ಸಂಜೆ ವೇಳೆ ಸದ್ದುಗುಂಟೆಪಾಳ್ಯ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ದುರಂತಕ್ಕೆ ಜೆಸಿಬಿ ಡ್ರೈವರ್‌ನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ರಸ್ತೆ ಕಾಮಗಾರಿಯ ವೇಳೆ ಜೆಸಿಬಿ ಡ್ರೈವರ್ ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಕೆಲಸ ಮಾಡುತ್ತಿದ್ದ. ಈ ವೇಳೆ ಲೈಟ್ ಕಂಬದಿಂದ ಮನೆಗೆ ಬೇರೆ ಕಡೆಗೆ ಕನೆಕ್ಟ್ ಮಾಡಿದ್ದ ವೈಯರ್‌ಗೆ ಜೆಸಿಬಿಯ ಮುಂಭಾಗ ಟಚ್ ಆಗಿದೆ. ಜನ ಜೋರಾಗಿ ಕೂಗಿಕೊಂಡರೂ ಡ್ರೈವರ್ ಕೇಳಿಸಿಕೊಳ್ಳದೇ ವೈಯರ್ ಎಳೆದಿರುವುದೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಜೆಸಿಬಿಯನ್ನು ಜಪ್ತಿ ಮಾಡಿ, ಜೆಸಿಬಿ ಚಾಲಕನ್ನು ವಶಕ್ಕೆ ಪಡೆದಿದ್ದಾರೆ. ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.