ಡೈಲಿ ವಾರ್ತೆ: 18/ಮಾರ್ಚ್ /2025

ಧರ್ಮಗ್ರಂಥ ಸುಟ್ಟ ವದಂತಿ: ನಾಗ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಹಲವರಿಗೆ ಗಾಯ

ನಾಗ್ಪುರ: ಮೊಘಲ್‌ ದೊರೆ ಔರಂಗಜೇಬ್ ಸಮಾಧಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದ್ದು, ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಘಟನೆಯಲ್ಲಿ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, ಆರು ಮಂದಿ ಸಾರ್ವಜನಿಕರು, ಮೂವರು ಪೊಲೀಸರು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಪ್ರತಿಭಟನೆ ವೇಳೆ ಧರ್ಮಗ್ರಂಥ ಕುರಾನ್‌ ಸುಡಲಾಗಿದೆ ಎಂದು ವದಂತಿ ಹಬ್ಬಿಸಲಾಗಿದ್ದು, ಇದರಿಂದಾಗಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಔರಂಗಜೇಬ್‌ ನೋವು ಮತ್ತು ಗುಲಾಮಗಿರಿಯ ಸಂಕೇತ. ಹೀಗಾಗಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿ ತೆರವುಗೊಳಿಸಬೇಕು ಎಂದು ವಿಎಚ್‌ಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಸೋಮವಾರ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದವು. ಜೊತೆಗೆ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಕೂಡಾ ಸಲ್ಲಿಸಿದ್ದವು.

ಅದರ ಬೆನ್ನಲ್ಲೆ ನಾಗಪುರದಲ್ಲಿ ಸೋಮವಾರ ಸಂಜೆ ನಡೆದ ಪ್ರತಿಭಟನೆ ವೇಳೆ ಕುರಾನ್‌ ಪ್ರತಿಯನ್ನು ಸುಡಲಾಗಿದೆ ಎಂಬ ವದಂತಿಯೊಂದು ಕಾಡ್ಗಿಚ್ಚಿನಂತೆ ಹರಡಿದ್ದು, ಇದರಿಂದ ಹಿಂಸಾಚಾರ ನಡೆದಿದೆ.

ಹಿಂಸಾಚಾರದ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಹಿಂಸಾಚಾರ ತಡೆಗೆ ಪೊಲೀಸರು ಆಶ್ರುವಾಯು ಸಿಡಿಸಿ, ಲಾಠಿಪ್ರಹಾರ ನಡೆಸಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ.

ನಿನ್ನೆ ಸಂಜೆ ಇಡೀ ನಾಗ್ಪುರ್​​ನಲ್ಲಿ ಪತ್ಥರ್​​​ಬಾಜಿ ನಡೆದಿದೆ. ದೊಣ್ಣೆಗಳನ್ನ ಹಿಡಿದು ರಸ್ತೆಗಳಲ್ಲಿ ದಾಂಧಲೆ ನಡೆಸಲಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ನಗರದಲ್ಲಿ 144 ಸೆಕ್ಷನ್​ ಜಾರಿ ಮಾಡಲಾಗಿದೆ.. ವದಂತಿಗೆ ಯಾರೂ ಕಿವಿಗೊಡದೇ, ಶಾಂತಿ ಕಾಪಾಡುವಂತೆ ನಾಗ್ಪುರ್​​​ ಲೋಕಲ್​​​ ಲೀಡರ್ಸ್​​​ ಕೇಂದ್ರ ಸಚಿವ ಗಡ್ಕರಿ ಮತ್ತು ಸಿಎಂ ಫಡ್ನವೀಸ್ ಮನವಿ ಮಾಡಿದ್ದಾರೆ.