


ಡೈಲಿ ವಾರ್ತೆ: 18/ಮಾರ್ಚ್ /2025


ಗಂಗೊಳ್ಳಿ| ಸಮುದ್ರದಲ್ಲಿ ಅವೈಜ್ಞಾನಿಕವಾಗಿ ಬೆಳಕು ಮೀನುಗಾರಿಕೆ ನಡೆಸುತ್ತಿರುವ ಬೋಟ್ ಗಳ ವಿರುದ್ದ ಕಾನೂನು ಕ್ರಮ

ಕುಂದಾಪುರ: ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಸಮುದ್ರದಲ್ಲಿ ಅವೈಜ್ಞಾನಿಕವಾಗಿ ಬೆಳಕು ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರತಿರುವುದರಿಂದ ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲ್ ಗಳನ್ನು ನಿಷೇಧಿಸಲಾಗಿದೆ.
ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಇದೇ 14 ರಂದು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕಾರ್ಯಾಚರಣೆ ನಡೆಸಿದ್ದು ಶ್ರೀ ಸಿದ್ದಿ, ಗಂಗಾಮಾತಾ, ಶ್ರೀ ಯಕ್ಷೇಶ್ವರಿ ಕೃಪಾ 3, ಎಂಬ ಬೋಟುಗಳು ಅವೈಜ್ಞಾನಿಕವಾಗಿ ಬೆಳಕು ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಪರಿಶೀಲನೆಯಲ್ಲಿ ಕಂಡುಬಂದಿರುತ್ತದೆ.
ಈ ಬೋಟುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕರು ಮತ್ತು ಆರ್ಬಿಟ್ರೇಟರ್ ರವರಿಗೆ ವರದಿ ಸಲ್ಲಿಸಿದ್ದು ಸದರಿ ವರದಿಯನ್ವಯ ಇದೇ 17ರಂದು ಉಡುಪಿ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕರು ಮತ್ತು ಆರ್ಬಿಟ್ರೇಟರ್ರವರು ವಿಚಾರಣೆ ನಡೆಸಿ ಈ ಬೋಟುಗಳ ಮಾಲಕರಿಗೆ ತಲಾ 5,000/- ರಂತೆ 15,000/- ದಂಡ ವಿಧಿಸಿ ಆದೇಶಿಸಿದ್ದು ಬೋಟು ಮಾಲಕರು ಸರಕಾರಕ್ಕೆ ದಂಡವನ್ನು ಪಾವತಿಸಿರುತ್ತಾರೆ.
ಇದೇ ರೀತಿ ಮಾರ್ಚ್ 14ರಂದು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ IND KA 03 MM 5000 ನೋಂದಣಿ ಸಂಖ್ಯೆಯ ಬೋಟ್‌ನಲ್ಲಿ ಬೆಳಕು ಮೀನುಗಾರಿಕೆ ನಡೆಸಲು ಜನರೇಟರ್ ಅಳವಡಿಸಿರುವುದು ಪರಿಶೀಲನೆಯಲ್ಲಿ ಕಂಡುಬಂದಿರುತ್ತದೆ. ಸದರಿ ಬೋಟ್‌ನ ಮಾಲೀಕರಿಗೂ ಉಡುಪಿ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕರು ಮತ್ತು ಆರ್ಬಿಟ್ರೇಟರ್ ರವರು ವಿಚಾರಣೆ ನಡೆಸಿ ಸದರಿ ಬೋಟು ಮಾಲಕರಿಗೆ ತಲಾ 5.000/- ರಂತೆ ದಂಡ ವಿಧಿಸಿ ಆದೇಶಿಸಿದ್ದು ಬೋಟು ಮಾಲಕರು ಸರಕಾರಕ್ಕೆ ದಂಡವನ್ನು ಪಾವತಿಸಿರುತ್ತಾರೆ. ಬೋಟುಗಳಲ್ಲಿ ಅಳವಡಿಸಿದ ಜನರೇಟರ್ ಹಾಗೂ ಬೆಳಕು ಮೀನುಗಾರಿಕೆಗೆ ಸಂಬಂಧಿಸಿದ ಲೈಟಿಂಗ್ ಉಪಕರಣಗಳನ್ನು ತೆರವುಗೊಳಿಸಿ ಬೋಟ್ ನ್ನು ಬಿಡುಗಡೆಗೊಳಿಸಲಾಯಿತು.
ನಿಷೇಧಿತ ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲ್ ಗಳನ್ನು ತಡೆಯಲು ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಕಾವಲು ಪೊಲೀಸ್ ವತಿಯಿಂದ ಜಂಟಿಯಾಗಿ ಫೈಯಿಂಗ್ ಸ್ವಾಡ್ ರಚಿಸಿದ್ದು ತಂಡವು ಮಲ್ಪೆ ಹಾಗೂ ಗಂಗೊಳ್ಳಿ ಬಂದರಿನಲ್ಲಿ ನಿರಂತರ ತಪಾಸಣೆ ನಡೆಸಲಿದೆಎಂದು ಪೊಲೀಸ್ ಪ್ರಕಟಣೆತಿಳಿಸಿದೆ