ಡೈಲಿ ವಾರ್ತೆ: 18/ಮಾರ್ಚ್ /2025

ಮಾ.22ರಂದು ಕರ್ನಾಟಕ ಬಂದ್‌| ʻಕಾಂತಾರʼ ನಟನ ಶಿವಾಜಿ ಚಿತ್ರ ಬಂದ್ರೆ ಬಹಿಷ್ಕಾರ – ವಾಟಾಳ್‌ ನಾಗರಾಜ್‌ ಎಚ್ಚರಿಕೆ

ಬೆಂಗಳೂರು: ಎಂಇಎಸ್‌ ಪುಂಡಾಟಿಕೆಗೆ ಕಡಿವಾಣ ಹಾಕಬೇಕು, ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡಿಗರ ಮೇಲೆ ಪರಭಾಷಿಕರ ದಾಳಿ ನಿಲ್ಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ಇದೇ ಮಾ.22ರಂದು ಕರ್ನಾಟಕ ಬಂದ್‌ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.

ಕರ್ನಾಟಕ ಬಂದ್‌ಗೆ ಸಂಬಂಧಿಸಿದಂತೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿಂದು ಸಭೆ ನಡೆಸಲಾಯಿತು. ಹಲವು ಕನ್ನಡಪರ ಸಂಘಟನೆಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್‌ ನಾಗರಾಜ್‌, ಅಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ಕರ್ನಾಟಕ ಬಂದ್‌ ನಡೆಸಲಾಗುವುದು.
ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದು ತಿಳಿಸಿದರು

ನೈತಿಕ ಬೆಂಬಲ ಅನ್ನೋರು ಮನೆಯಲ್ಲಿರಿ:
ಯಾವುದೇ ಕಾರಣಕ್ಕೂ ಬಂದ್‌ ಹಿಂಪಡೆಯುವುದಿಲ್ಲ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಪದೇ ಹಲ್ಲೆ ನಡೆಯುತ್ತಿದೆ. ಈ ಬಂದ್‌ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಬಹುತೇಕ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಆಟೋ ಚಾಲಕರ ಸಂಘಟನೆಗಳು, ಕ್ಯಾಬ್, ಒಲಾ, ಉಬರ್‌, ಹೋಟೆಲ್ ಮಾಲೀಕರು ಸೇರಿ ಎಲ್ಲರೂ ಬಂದ್‌ಗೆ ಬೆಂಬಲ ನೀಡಬೇಕು. ನಮ್ಮ ಮೆಟ್ರೋ, ಮಾಲ್‌ಗಳೂ ಬಂದ್‌ ಆಗಬೇಕು. ಇಲ್ಲದಿದ್ದರೇ ನಾವೇ ಬಂದ್‌ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರಲ್ಲದೇ ಕರ್ನಾಟಕ ಬಂದ್‌ಗೆ ನಮ್ಮದು ನೈತಿಕ ಬೆಂಬಲ ಅನ್ನುವವರು ಮನೆಯಲ್ಲೇ ಕುಳಿತುಕೊಳ್ಳಿ ಎಂದು ಹೇಳಿದರು.

ರಾಜ್ಯದಲ್ಲಿ ದಿನೇ ದಿನೇ ಕನ್ನಡಿಗರ ಮೇಲೆ ಪರಭಾಷಿಗರ ದಾಳಿ ಹೆಚ್ಚಾಗುತ್ತಿದೆ. ಬೆಂಗಳೂರು, ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಯುತ್ತಿದೆ. ಬಿಹಾರ, ಬಂಗಾಳ, ತಮಿಳು, ತೆಲುಗು, ಮಾರ್ವಾಡಿಯವರು ರಾಜ್ಯದಲ್ಲಿ ಸುಮಾರು 2 ಕೋಟಿ ಜನ ಇದ್ದಾರೆ. ತಲೆಬೋಳಿಸೋದ್ರಿಂದ ಹಿಡಿದು ಪಾನಿಪುರಿ ಮಾರೋನು ಕೂಡ ಅನ್ಯರಾಜ್ಯದವರಿದ್ದಾರೆ. ಇದನ್ನೆಲ್ಲ ಯಾರು ಕೇಳೋದು? ಇದೆಲ್ಲದರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ಎಂಇಎಸ್, ಶಿವಸೇನೆಯನ್ನು ನಿಷೇಧ ಮಾಡಬೇಕು. ಬೆಳಗಾವಿ ನಮ್ಮದು. ಬೆಳಗಾವಿಯಲ್ಲಿ ಶಿವಾಜಿ, ಸಂಭಾಜಿ ಪ್ರತಿಮೆ ಬೇಕಾ? ಪರಭಾಷಿಗರು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವುದನ್ನು ನಿಲ್ಲಿಸಬೇಕು. ಕರ್ನಾಟಕದಲ್ಲಿದ್ದು ಕನ್ನಡಿಗರ ಮೇಲೆ ಹಲ್ಲೆ ನಡೆಸುವವರು ರಾಜ್ಯ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದರು.

ಮಾ.22ರಂದು ಯಾರೂ ನಮ್ಮ ಮೆಟ್ರೋ ಹತ್ತಬೇಡಿ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡಿದ್ದು, ಅಂದು ಬಸ್ ಓಡಿಸಬಾರದು ಅಂತ ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ, ಅವತ್ತು ಬಸ್ ಓಡಿಸಬಾರದು. ಮಂತ್ರಿ, ಸಿಎಂ ಕಾರಿನ ಚಾಲಕರೇ ಆಗಿರಲಿ, ಮಾನ, ಮರ್ಯಾದೆ, ಗೌರವ, ಕನ್ನಡ ಅಭಿಮಾನ, ಸ್ವಾಭಿಮಾನಕ್ಕೆ ಅಂದು ಗಾಡಿ ಹತ್ತಬೇಡಿ.‌ ಚಾಲಕರು ಯಾರೇ ಇರಲಿ ಬಸ್, ಆಟೋ, ಕಾರು ಚಾಲಕರಿಗೂ ಇದು ಸ್ವಾಭಿಮಾನ, ಮರ್ಯಾದೆ ಪ್ರಶ್ನೆಯಾಗಿದೆ ಎಂದು ನುಡಿದರು.

ರಿಷಬ್‌ ಶೆಟ್ಟಿಗೆ ಪರೋಕ್ಷ ವಾರ್ನಿಂಗ್‌:
ಮುಂದುವರಿದು… ಶಿವಾಜಿ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ವಾಟಾಳ್‌ ನಾಗರಾಜ್‌ ಪರೋಕ್ಷ ಎಚ್ಚರಿಕೆ ನೀಡಿದರು. ಕಾಂತಾರ ಚಿತ್ರದ ನಟ ‘ಛತ್ರಪತಿ ಶಿವಾಜಿ’ ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ. ಅವರು ಸಿನಿಮಾ ಮಾಡಕೂಡದು, ಶಿವಾಜಿ ಚಿತ್ರ ಬಂದರೆ ಬಹಿಷ್ಕಾರ ಹಾಕ್ತೇವೆ ಎಂದು ರಿಷಬ್‌ ಶೆಟ್ಟಿ ಹೆಸರು ಹೇಳದೇ ಎಚ್ಚರಿಕೆ ಕೊಟ್ಟರು.