


ಡೈಲಿ ವಾರ್ತೆ: 20/ಮಾರ್ಚ್ /2025


ಎಣ್ಣೆ ಏಟಲ್ಲಿ ದೇವಸ್ಥಾನದ ಮೇಲೆ ಕಲ್ಲು ಎಸೆತ – ಯುವಕನನ್ನು ಕಂಬಕ್ಕೆ ಕಟ್ಟಿಹಾಕಿದ ಜನ

ಬೆಳಗಾವಿ: ಎಣ್ಣೆ ಏಟಲ್ಲಿ ಯುವಕನೋರ್ವ ದೇವಸ್ಥಾನದ ಮೇಲೆ ಕಲ್ಲು ಎಸೆದಿರುವ ಘಟನೆ ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿ ಅಶ್ವತ್ಥಾಮ ದೇವಸ್ಥಾನದಲ್ಲಿ ನಡೆದಿದೆ.
ಕಲ್ಲೆಸೆದ ವ್ಯಕ್ತಿಯನ್ನು ಉಜ್ವಲ್ ನಗರದ ನಿವಾಸಿ ಯಾಶೀರ್ ಎಂದು ಗುರುತಿಸಲಾಗಿದೆ.
ದೇವಸ್ಥಾನದ ಮೇಲೆ ಕಲ್ಲು ತೂರುತ್ತಿದ್ದಂತೆ ಯಾಶೀರ್‌ನನ್ನು ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದರು. ಈ ವೇಳೆ ಸ್ಥಳೀಯರು ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಪ್ರಶ್ನೆ ಮಾಡಿದಾಗ ನನ್ನಿಂದ ತಪ್ಪಾಗಿದೆ. ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದ. ಸ್ಥಳೀಯರು ಮತ್ತೆ ಪ್ರಶ್ನೆ ಮಾಡಿದಾಗ ಈ ಹಿಂದೆ ಕೆಲವರು ಬುರ್ಖಾ ಧರಿಸಿ ಡಾನ್ಸ್ ಮಾಡಿದ್ದರು ಎಂದು ಹೇಳಿದನು.
ಭಾಷಾ ವೈಷಮ್ಯದಿಂದ ಆಗಾಗ ಸುದ್ದಿಯಲ್ಲಿರುವ ಬೆಳಗಾವಿ ಇಂತಹ ಕಿಡಿಗೇಡಿಗಳು ಮಾಡುವ ಕೃತ್ಯಗಳಿಂದ ಕೋಮು ವೈಷಮ್ಯದತ್ತ ವಾಲುತ್ತಿದೆಯಾ ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತಿವೆ. ಯಾರೋ ಒಬ್ಬ ಕಿಡಿಗೇಡಿ ಬುರ್ಖಾ ಹಾಕಿಕೊಂಡು ಡಾನ್ಸ್ ಮಾಡಿದರೆ, ಮತ್ತೊಬ್ಬ ಕಿಡಿಗೇಡಿ ದೇವಸ್ಥಾನದ ಮೇಲೆ ಕಲ್ಲು ತೂರಿ ಎರಡೂ ಸಮಾಜಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಇಂತಹ ಕಿಡಿಗೇಡಿಗಳ ಕೃತ್ಯಗಳನ್ನು ಪ್ರಜ್ಞಾವಂತ ಸಮಾಜ ಸೂಕ್ಷ್ಮವಾಗಿ ಗಮನಿಸಬೇಕಿದೆ. ಅಲ್ಲದೆ ಪೊಲೀಸರು ಸಹ ಇಂತವರಿಗೆ ಬಿಸಿ ಮುಟ್ಟಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.