


ಡೈಲಿ ವಾರ್ತೆ: 20/ಮಾರ್ಚ್ /2025


ನಾಪತ್ತೆಯಾಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶವವಾಗಿ ಪತ್ತೆ

ಚಿಕ್ಕಮಗಳೂರು: ಕಳಸ ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಶವ ಭದ್ರಾ ನದಿಯಲ್ಲಿ ಪತ್ತೆಯಾಗಿದೆ.
ಕಳಸ ತಾಲೂಕಿನ ಬಾಳೆಹೊಳೆ ಮೂಲದ ವಿದ್ಯಾರ್ಥಿ ಶ್ರೇಯಸ್ ಮೃತ ಬಾಲಕ.
ಮಾ.16ರಂದು ವಿದ್ಯಾರ್ಥಿ ಕಾಣೆಯಾಗಿದ್ದ. ಶಾಲೆ ಮುಗಿದ ಬಳಿಕ ಶ್ರೇಯಸ್ ಮನೆಗೆ ತೆರಳಿರಲಿಲ್ಲ. ಈ ಬಗ್ಗೆ ಪೋಷಕರು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಲ್ಲದೇ ವಿದ್ಯಾರ್ಥಿ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಆತನ ಸುಳಿವು ಸಿಕ್ಕಿರಲಿಲ್ಲ. ಮಾ.19ರಂದು ಭದ್ರಾ ನದಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿ ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನವನಾಗಿದ್ದು, ಬಾಳೆಹೊಳೆಯಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವ್ಯಾಸಾಂಗ ಮಾಡುತ್ತಿದ್ದ. ಪರೀಕ್ಷೆಗೆ 2 ದಿನ ಇರುವಂತೆ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಲೆ ಬಿಟ್ಟ ನಂತರ ಭದ್ರಾ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾನೋ? ಈತನೊಂದಿಗೆ ಬೇರೆ ಸ್ನೇಹಿತರು ತೆರಳಿದ್ದರೆ? ಯಾರಾದರೂ ಕೊಲೆ ಮಾಡಿರಬಹುದೆ? ತಾನೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಹೀಗೆ ಹತ್ತುಹಲವು ಅನುಮಾನಗಳು ಮೂಡಿವೆ.
ಈ ಸಂಬಂಧ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂಡಿಗೆರೆ ಎಸ್‌ಐ ರಾಜಶೇಖರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.