


ಡೈಲಿ ವಾರ್ತೆ: 21/ಮಾರ್ಚ್ /2025


ವಿಧಾನಸಭೆ ಗದ್ದಲ: 6 ತಿಂಗಳವರೆಗೂ 18 ಬಿಜೆಪಿ ಶಾಸಕರ ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ

ಬೆಂಗಳೂರು: ಸದನದ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ 18 ಬಿಜೆಪಿ ಶಾಸಕರನ್ನು ಕಲಾಪದಿಂದ 6 ತಿಂಗಳು ಅಮಾನತುಗೊಳಿಸಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದಾರೆ.
ಹನಿಟ್ರ್ಯಾಪ್ ಪ್ರಕರಣ ಖಂಡಿಸಿ, ಪ್ರಕರಣದ ಸಿಬಿಐ ತನಿಖೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಸ್ಪೀಕರ್ ಪೀಠದ ಮೇಲೆ ಏರಿ ಬಂದ ಬಿಜೆಪಿ ಸದಸ್ಯರು ತಮ್ಮ ಆಕ್ರೋಶ ಹೊರಹಾಕಿದ್ದರು. ಗದ್ದಲ ಕೋಲಾಹಲದ ನಡುವೆ ಸ್ಪೀಕರ್ ಪೀಠದ ಮೇಲೆ ಬಿಜೆಪಿ ಸದಸ್ಯರು ಕಾಗದ ಪ್ರತಿಗಳನ್ನು ಹರಿದು ಎಸೆದಿದ್ದರು. ಈ ಹಿನ್ನೆಲೆ ಪೀಠಕ್ಕೆ ಅಗೌರವ ತೋರಿದ 18 ಮಂದಿ ಬಿಜೆಪಿ ಸದಸ್ಯರನ್ನು ಸದನ ಕಲಾಪದಿಂದ 6 ತಿಂಗಳಿಗೆ ಅಮಾನತುಗೊಳಿಸಿ ಸ್ಪೀಕರ್ ರೂಲಿಂಗ್ ನೀಡಿದರು.
ಯಾರ್‍ಯಾರು ಅಮಾನತು: ಬಿಜೆಪಿ ಶಾಸಕರಾದ ದೊಡ್ಡಣ್ಣ ಗೌಡ ಪಾಟೀಲ್, ಎಸ್.ಆರ್ ವಿಶ್ವನಾಥ್, ಅಶ್ವತ್ಥ್ ನಾರಾಯಣ್, ಚೆನ್ನಬಸಪ್ಪ, ಉಮನಾಥ್ ಕೋಟ್ಯಾನ್, ಯಶಪಾಲ್ ಸುವರ್ಣ, ಹರೀಶ್ ಬಿ.ಪಿ., ಚಂದ್ರು ಲಮಾಣಿ, ಶರಣು ಸಲಗಾರ್, ಶೈಲೇಂದ್ರ ಬೆಳ್ದಾಳೆ, ಸಿ.ಕೆ.ರಾಮಮೂರ್ತಿ, ಮುನಿರತ್ನ, ಧೀರಜ್ ಮುನಿರಾಜ್, ಭರತ್ ಶೆಟ್ಟಿ, ಬಸವರಾಜ್ ಮತ್ತಿಮೂಡ್, ಸುರೇಶ್ ಗೌಡ, ಬಿ.ಬಸವರಾಜ್, ಎಂ.ಆರ್.ಪಾಟೀಲ್ ಅವರನ್ನು ಆರು ತಿಂಗಳಿಗೆ ವಿಧಾನಸಭೆ ಕಲಾಪದಿಂದ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಪೀಠ ಸಹಿಸುವುದಿಲ್ಲ: ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಅಮಾನತು ಪರವಾಗಿ ನಿಲುವಳಿ ಸೂಚಿಸಿದರು. ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್ ರೂಲಿಂಗ್ ನೀಡುತ್ತಾ, ಪೀಠದ ಮಹತ್ವ, ಪಾವಿತ್ರ್ಯತೆ ಕಾಪಾಡಬೇಕು. ಪೀಠದ ಗೌರವಕ್ಕೆ ಧಕ್ಕೆ ಮಾಡಕೂಡದು. ಪೀಠದಿಂದ ನಾವು ದೊಡ್ಡವರಲ್ಲ. ನಾವೆಲ್ಲರೂ ಬದ್ಧತೆ, ಶಾಂತತೆಯಿಂದ ನಡೆದುಕೊಳ್ಳಬೇಕು. ಪೀಠದ ಮೇಲೆ ಹತ್ತಿ ಅಗೌರವ ತೋರಿದ್ದಾರೆ. ಕಾರ್ಯಕಲಾಪ ಅಡ್ಡಿಪಡಿಸಿ, ಸದನದಲ್ಲಿ ಅಗೌರವ, ಬೇಜವಾಬ್ದಾರಿಯಿಂದ ವರ್ತಿಸಲಾಗಿದೆ. ಯು.ಟಿ.ಖಾದರ್ ಕ್ಷಮಿಸಬಹುದು ಆದರೆ, ಪೀಠ ಸಹಿಸುವುದಿಲ್ಲ ಎಂದರು.
6 ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆ:
ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮಂಡಿಸಿದ ಹಾಗೂ ಸದನ ಅಂಗೀಕರಿಸಿದ ಪ್ರಸ್ತಾವದಂತೆ 21.03.2025ರಂದು ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತು ಹಾಗೂ ಅಗೌರವದಿಂದ ನಡೆದುಕೊಂಡಿದ್ದರಿಂದ ವಿಧಾನಸಭಾ ಸದಸ್ಯರುಗಳಾದ ದೊಡ್ಡನಗೌಡ ಹೆಚ್.ಪಾಟೀಲ್, ಪ್ರತಿಪಕ್ಷದ ಮುಖ್ಯ ಸಚೇತಕ ಸಿ.ಎನ್.ಅಶ್ವತ್ಥ್ ನಾರಾಯಣ್, ಎಸ್.ಆರ್.ವಿಶ್ವನಾಥ್, ಬಿ.ಎ.ಬಸವರಾಜ, ಎಂ.ಆರ್.ಪಾಟೀಲ್, ಚನ್ನಬಸಪ್ಪ (ಚೆನ್ನಿ), ಬಿ.ಸುರೇಶ್ ಗೌಡ, ಉಮಾನಾಥ್ ಎ.ಕೋಟ್ಯಾನ್, ಶರಣು ಸಲಗರ, ಶೈಲೇಂದ್ರ ಬೆಲ್ದಾಳೆ, ಸಿ.ಕೆ.ರಾಮಮೂರ್ತಿ, ಯಶಪಾಲ್ ಎ.ಸುವರ್ಣ, ಬಿ.ಪಿ. ಹರೀಶ್, ಭರತ್ ಶೆಟ್ಟಿ, ವೈ, ಮುನಿರತ್ನ, ಬಸವರಾಜ್ ಮತ್ತಿಮೂಡ್, ಧೀರಜ್ ಮುನಿರಾಜು ಮತ್ತು ಡಾ.ಚಂದ್ರು ಲಮಾಣಿ ಅವರನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು, ಅಮಾನತುಗೊಳಿಸಲಾಗಿರುತ್ತದೆ ಎಂದು ರೂಲಿಂಗ್ ನೀಡಲಾಯಿತು.
ಅಮಾನತಾದವರನ್ನು ಸಭಾಂಗಣದಿಂದ ಎತ್ತೊಯ್ದು ಮಾರ್ಷಲ್ಗಳು: ಸದನದ ಕಾರ್ಯಕಲಾಪ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆರು ತಿಂಗಳವರೆಗೆ ಸದನಕ್ಕೆ ಬಾರದಂತೆ ಅಮಾನತುಗೊಳಿಸುವುದಾಗಿ ರೂಲಿಂಗ್ ನೀಡಿದರು. ಬಳಿಕ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು. ಬಳಿಕ ಸದನದಿಂದ ಅಮಾನತುಗೊಂಡ 18 ಮಂದಿ ಬಿಜೆಪಿ ಸದಸ್ಯರನ್ನು ಮಾರ್ಷಲ್ಗಳು ಸಭಾಂಗಣದಿಂದ ಹೊರಗೆ ಎತ್ತೊಯ್ದರು.
ಅಮಾನತು ಅವಧಿಯಲ್ಲಿ ಏನೆಲ್ಲ ನಿಷಿದ್ಧ?: ಅಮಾನತು ಅವಧಿಯಲ್ಲಿ ಅವರುಗಳು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ. ಅವರು ಸದಸ್ಯರಾಗಿರುವ ವಿಧಾನಮಂಡಲದ/ವಿಧಾನಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ. ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ. ಅಮಾನತಿನ ಅವಧಿಯಲ್ಲಿ ಅವರುಗಳು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರುಗಳು ಮತದಾನ ಮಾಡುವಂತಿಲ್ಲ. ಅಲ್ಲದೆ, ಈ ಅವಧಿಯಲ್ಲಿ ಅವರುಗಳು ಅರ್ಹರಿರುವುದಿಲ್ಲ. ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿಲ್ಲ.