ಡೈಲಿ ವಾರ್ತೆ: 22/ಮಾರ್ಚ್ /2025

ಕೋಟ| ಕರಿಮಣಿ ಕಳ್ಳನ ಬಂಧನ

ಕೋಟ: ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಕರಿಮಣಿ ಕಸಿದು ಪರಾರಿಯಾದ ಘಟನೆ ಗುರುವಾರ ಬ್ರಹ್ಮಾವರ ತಾಲೂಕಿನ ಯಡ್ತಾಡಿಯಲ್ಲಿ ಸಂಭವಿತ್ತು.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಶುಕ್ರವಾರವೇ ಆರೋಪಿ ಸಾಲಿಗ್ರಾಮ ಕಾರ್ಕಡ ಭಟ್ರಕಟ್ಟೆ ನಿವಾಸಿ ಮಂಜುನಾಥ ಮಯ್ಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಬಂಧಿಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ:
ಮಾ. 21 ರಂದು ಗುರುವಾರ ಯಡ್ತಾಡಿ ನಿವಾಸಿ ಸೀತಾ ಬಾಯಿ ಅವರು ಪಕ್ಕದ ಮನೆಯ ಕಾರ್ಯಕ್ರಮಕ್ಕೆಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ತಾರು ಪಡುಮನೆ ಸಮೀಪ ಯಡ್ತಾಡಿ ಕಡೆಯಿಂದ ಬೈಕ್‌ನಲ್ಲಿ ಬಂದ ಆರೋಪಿ 28 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಮಂದಾರ್ತಿ ಕಡೆಗೆ ಪರಾರಿಯಾಗಿದ್ದ.

ತತ್‌ಕ್ಷಣ ಸ್ಥಳೀಯರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಸುಮಾರು 20 ಕಿ.ಮೀ. ವ್ಯಾಪ್ತಿಯ ವಿವಿಧ ಕಡೆಗಳ ಸಿ.ಸಿ. ಕೆಮರಾಗಳನ್ನು ಪೊಲೀಸರು ಪರಿಶೀಲಿಸಿದ್ದು, ಆಗ ಬೈಕ್ ಬಗ್ಗೆ ಮಾಹಿತಿ ದೊರೆತಿದೆ. ಅದರ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೌಳಿಕೆರೆಯಲ್ಲೂ ಸರ ಕಸಿದಿದ್ದ!
ಈ ಹಿಂದೆ ಬಾರ್ಕೂರು ಚೌಳಿಕೆರೆ ಸಮೀಪ ವೃದ್ಧೆಯೊಬ್ಬರ ಕುತ್ತಿಗೆಯಿಂದ ಇದೇ ರೀತಿ ಚಿನ್ನವನ್ನು ಅಪಹರಿದ್ದ ಬಗ್ಗೆಯೂ ಬ್ರಹ್ಮಾವರ ಠಾಣೆಯಲ್ಲೇ ಪ್ರಕರಣ ದಾಖಲಾಗಿತ್ತು. ಇದನ್ನೂ ತಾನೇ ಮಾಡಿರುವುದಾಗಿ ಮಂಜುನಾಥ ಒಪ್ಪಿಕೊಂಡಿದ್ದು, ಆ ಚಿನ್ನವನ್ನು ಸಹಕಾರಿ ಸಂಘವೊಂದರಲ್ಲಿ ಅಡವಿರಿಸಿದ್ದಾಗಿ ತಿಳಿಸಿದ್ದ. ಪೊಲೀಸರು ಆ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಈತ ವೃತ್ತಿಯಲ್ಲಿ ಪರೋಟ ವ್ಯಾಪಾರ ನಡೆಸುತ್ತಿದ್ದ. ಆತ ಭಾರೀ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.