ಡೈಲಿ ವಾರ್ತೆ: 22/ಮಾರ್ಚ್ /2025

ಅಂಕೋಲಾ ಭೂಕುಸಿತ ದುರಂತ: ಗುತ್ತಿಗೆದಾರ ಕಂಪನಿ ಐಆರ್‌ಬಿ ವಿರುದ್ಧ ಕೊನೆಗೂ ಪ್ರಕರಣ ದಾಖಲು

ಅಂಕೋಲಾ: ಕಳೆದ ವರ್ಷ ಜುಲೈನಲ್ಲಿ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊನೆಗೂ ಗುತ್ತಿಗೆದಾರ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲಾ ಎಸ್‌ಪಿ ನಾರಾಯಣ್ ಅವರ ಸೂಚನೆಯ ಮೇರೆಗೆ, ವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮಠಪತಿ ಅವರು ಐಆರ್‌ಬಿ ಅಧಿಕಾರಿಗಳಾದ ರವೀಂದ್ರ ಡಿ. ಮಹೇಶ್ಕರ್, ರವೀಂದ್ರ ದುರಿವಾಲ್, ಜಶ್ ರಾಮ್ರೆಸ್, ದೀಪಾಲಿ ಹೌಸ್ಕರ್, ವಿಜಯ್ ಭಟ್, ಬಜರಂಗ್ ಲಾಲ್ ಗುಪ್ತಾ, ಸಂದೀಪ್ ಜೇ ಸಾಹ್, ಪೃಥ್ವಿ ಸವಾಲಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಶಿರೂರು ಬೆಟ್ಟದ ಭೂಕುಸಿತದಿಂದ 11 ಜನರು ಸಾವನ್ನಪ್ಪಿದ್ದಾರೆ.
ಭಾರಿ ಪ್ರಮಾಣದ ಜೀವಹಾನಿ ಸಂಭವಿಸಿದ ನಂತರ, ಅಪಘಾತಕ್ಕೆ ಗುತ್ತಿಗೆದಾರ ಕಂಪನಿಯನ್ನೇ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಲಾಯಿತು.
ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಈ ವರ್ಷ ಫೆಬ್ರವರಿ 24 ರಂದು ಅಂಕೋಲಾ ನ್ಯಾಯಾಲಯವು ಎಂಟು ಐಆರ್‌ಬಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು.

ಎರಡು ದಿನಗಳ ಹಿಂದೆ ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಸಾರ್ವಜನಿಕರು ಅಂಕೋಲಾ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಮತ್ತೆ ನ್ಯಾಯಾಲಯದ ಮೊರೆ ಹೋಗುವುದಾಗಿ ಬೆದರಿಕೆ ಹಾಕಿದ್ದರು. ಕ್ರಮ ಕೈಗೊಂಡ ಜಿಲ್ಲಾ ಎಸ್ಪಿ, ಗುತ್ತಿಗೆದಾರ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆಗಳನ್ನು ನೀಡಿದರು.