


ಡೈಲಿ ವಾರ್ತೆ: 24/ಮಾರ್ಚ್ /2025


ಉಡುಪಿ| ‘ಜೈ ಬಾಪು ಜೈ ಭೀಮ್ ಜೈ ಸಂವಿಧಾನ’ ಅಭಿಯಾನದ ಪ್ರಯುಕ್ತ ‘ಗಾಂಧಿ ಭಾರತ’ ಸಮಾವೇಶ: ಡಾ.ಬಿ.ಆರ್.ಅಂಬೇಡ್ಕರ್ ಮಹಾನ್ ಮಾನವತಾವಾದಿ- ಮಾಜಿ ಸ್ಪೀಕರ್ ರಮೇಶ್ ಕುಮಾರ್

ಉಡುಪಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಕೇವಲ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸುವುದು ತಪ್ಪು. ಅವರೊಬ್ಬ ಮಹಾನ್ ಮಾನವತಾವಾದಿ ಎಂಬುದಾಗಿ ನಾವೆಲ್ಲ ಸ್ವೀಕರಿಸಬೇಕು ಎಂದು ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಅವರು ವಿವಿಧ ಸಮಾನ ಮನಸ್ಕರ ಸಂಘಟನೆಗಳ ನೇತೃತ್ವದಲ್ಲಿ ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಸಹಯೋಗದೊಂದಿಗೆ ‘ಜೈ ಬಾಪು ಜೈ ಭೀಮ್ ಜೈ ಸಂವಿಧಾನ’ ಅಭಿಯಾನದ ಪ್ರಯುಕ್ತ ಉಡುಪಿ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ‘ಗಾಂಧಿ ಭಾರತ’ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ ಮೀಸಲಾತಿಯೇ ಇಲ್ಲದ ಕಾಲದಲ್ಲಿ ಸಂವಿಧಾನ ರಚಿಸಲು ಅಂಬೇಡ್ಕರ್‌ರನ್ನು ಆಯ್ಕೆ ಮಾಡಲಾಯಿತು. ಯಾಕೆಂದರೆ ಅವರು ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಕಾನೂನು ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದರು. ಸಂವಿಧಾನದಿಂದಾಗಿ ಈ ದೇಶದಲ್ಲಿ ಹೋರಾಟ ಮಾಡದವರಿಗೂ ಸ್ವಾತಂತ್ರ್ಯ ದೊರೆತಿದೆ ಎಂದರು. ಈ ದೇಶವನ್ನು ಸಂವಿಧಾನದ ಮೂಲಕ ಸುಧಾರಿಸಲು ಸಾಧ್ಯವಿಲ್ಲ ಎಂದು ಗೋಲ್ ವಾಲ್ಕರ್ ಬರೆದಿದ್ದರು. ಅದಕ್ಕೆ ಅವರು ಸಂವಿಧಾನ ಬದಲಾಯಿಸಬೇಕು ಎಂದು ಹೇಳಿದ್ದರು. ಅಂಬೇಡ್ಕರ್ ಅವರ ಬಾಲ್ಯ, ಅಂಬೇಡ್ಕರ್ ತಂದೆ ತಾಯಿಗೆ ಆದ ಅನುಭವ ಅವರಿಗೆ ಆಗಿರಲಿಲ್ಲ. ಜಾತಿಯ ಕಾರಣಕ್ಕೆ ನೋವು ಅನುಭವಿಸಿದ ಅಂಬೇಡ್ಕರ್ ಸಂವಿಧಾನ ರಚಿಸುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿ ಅವರು ಮಾತನಾಡಿ ಸಂವಿಧಾನವನ್ನು ಬದಲಾಯಿಸುವ ಹುನ್ನಾರ ಆಡಳಿತ ರೂಢ ಕೇಂದ್ರ ಸರಕಾರ ನಡೆಸುತ್ತಿದೆ. ಬಿಜೆಪಿ ಸಂವಿಧಾನ ವಿರೋಧಿಯಲ್ಲಿ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತೀ ಅಗತ್ಯ. ಅದೇ ರೀತಿ ಮೀಸಲಾತಿಯನ್ನು ತೆಗೆದು ಹಾಕುವ ಪ್ರಯತ್ನದಲ್ಲೂ ಬಿಜೆಪಿ ಇದೆ ಎಂದು ಆರೋಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಸ್ವೀಕರ್ ಪೀಠಕ್ಕೆ ಅಗೌರವ ತೋರಿಸಿದ್ದಾರೆ. ಅದು ಅವರ ತಪ್ಪಲ್ಲ. ಅವರನ್ನು ಆರಿಸಿ ಕಳುಹಿಸಿರುವ ಜನರ ತಪ್ಪು. ಚುನಾವಣೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜನ ಸಾಕಷ್ಟು ಪ್ರಜ್ಞಾ ಪೂರ್ವಕವಾಗಿ ಇರಬೇಕು ಎಂದು ಹೇಳಿದರು.
ಕಾಂಗ್ರೆಸ್ ಮಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ದೇಶದ ಕಟ್ಟಕಡೆಯ ವ್ಯಕ್ತಿಗೂ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬದುಕುವ ಹಕ್ಕು ನೀಡಿದೆ. ದುರಾದೃಷ್ಕರ ವಿಚಾರ ಏನೇಂದ್ರೆ ಇವತ್ತು ದೇಶದಲ್ಲಿ ಬಡವ ಬಡವನಾಗಿಯೇ ಉಳಿದಿದ್ದಾನೆ. ಶ್ರೀಮಂತ ಶ್ರೀಮಂತರಾಗಿ ಬೇಳೆಯುತ್ತಿದ್ದಾರೆ. ಇವತ್ತು ಸಂವಿಧಾನದ ಅರಿವು ಎಲ್ಲರಲ್ಲೂ ಮೂಡಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಡವರು ಹಿಂದುಳಿದವರು ಬದುಕಲು ಕಷ್ಟವಾಗಬಹುದು, ಹೀಗಾಗಿ ಗಾಂಧಿ ಭಾರತ ಸಂವಿಧಾನ ಅರಿವು ಸಮಾವೇಶವನ್ನು ನಾವು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ಲಾವಣ್ಯ ಬಲ್ಲಾಳ್, ಕಿಶನ್ ಹೆಗ್ಡೆ ಕೊಳ್ಕೆ ಬೈಲು, ಮುನಿಯಾಲು ಉದಯ ಶೆಟ್ಟಿ, ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ, ಫಾ.ವಿಲಿಯಂ ಮಾರ್ಟಿಸ್, ದಿನಕರ ಹೇರೂರು, ದಿನೇಶ್ ಮೊಳಹಳ್ಳಿ, ವರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಹಬೀಬ್ ಅಲಿ, ಹರೀಶ್ ಕಿಣಿ, ಕೃಷ್ಣ ಶೆಟ್ಟಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಉಡುಪಿ ಕೆ.ಎಂ.ಮಾರ್ಗದಲ್ಲಿರುವ ನಿತ್ಯಾನಂದ ಮಂದಿರದಿಂದ ಕಾರ್ಯಕ್ರಮ ನಡೆಯುವ ಮೈದಾನದವರೆಗೆ ಮೆರವಣಿಗೆ ನಡೆಯಿತು.