


ಡೈಲಿ ವಾರ್ತೆ: 25/ಮಾರ್ಚ್ /2025


ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ

ಉಡುಪಿ|ಬೆಂಗಳೂರು: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಇದರ ನಿಯೋಗವು ಮಾಜಿ ಸಚಿವರು, ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆಯವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ ರವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಭೇಟಿ ಮಾಡಲಾಯಿತು.

ಭೇಟಿಯ ಸಂದರ್ಭದಲ್ಲಿ ಕೊರಗ ಸಮುದಾಯದ ಪ್ರಮುಖ ಬೇಡಿಕೆಯಾದ ಕೊರಗ ವಿದ್ಯಾವಂತ ಯುವಜನರಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಲಾಯಿತು. ಹಾಗೂ ಸಮುದಾಯದ ಇನ್ನಿತರ ಬೇಡಿಕೆಗಳಾದ ಭೂ ರಹಿತರಿಗೆ ಕನಿಷ್ಠ ಒಂದು ಎಕರೆ ಕೃಷಿ ಭೂಮಿ, ಕುಲಕಸುಬು ಉತ್ಪನ್ನಗಳನ್ನು ಬ್ರಾಂಡ್ ಉತ್ಪನ್ನವಾಗಿಸುವುದು, ಮಾರುಕಟ್ಟೆ ಕಲ್ಪಿಸುವುದು ಮತ್ತು ಈಗಾಗಲೇ ನೀಡಲಾಗಿರುವ ಭೂಮಿಗೆ ಪುನರ್ವಸತಿ ಕಾರ್ಯಕ್ರಮಕ್ಕಾಗಿ ರೂಪಾಯಿ 10 ಕೋಟಿ ಅನುದಾನ ನೀಡುವುದು, ಕ್ಷೀಣಿಸುತ್ತಿರುವ ಜನಸಂಖ್ಯೆ ಕುರಿತು ಸಂಶೋಧನೆ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ರೂಪಾಯಿ 20 ಕೋಟಿ ಅನುದಾನ ಮತ್ತು ಕೊರಗರಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಸಮಗ್ರ ಕೊರಗರ ಅಭಿವೃದ್ಧಿಯನ್ನು ಪಡಿಸುವುದು ಮುಂತಾದ ಹಲವು ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.
ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಸರ್ಕಾರ ಕೊರಗರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಿದೆ ಮತ್ತು ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಒಕ್ಕೂಟದ ನಿಯೋಗದಲ್ಲಿ ಮಾಜಿ ಸಚಿವರಾದ ಕೆ. ಜಯಪ್ರಕಾಶ ಹೆಗ್ಡೆ, ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ, ಉಪಾಧ್ಯಕ್ಷೆ ಪವಿತ್ರ ನಡೂರು, ಸಂಯೋಜಕರಾದ ಪುತ್ರ ಕೆ. ಹೆಬ್ರಿ, ಮುಖಂಡರಾದ ಬೊಗ್ರ ಕೊಕ್ಕರ್ಣೆ, ಶೀನ ಕಾಂಜರಕಟ್ಟೆ, ನರಸಿಂಹ ಪೆರ್ಡೂರು, ಲೀಲಾ ಕಾಪು, ಸಮುದಾಯದ ಯುವಜನರಾದ ಪ್ರೀತಿ ಹೆಬ್ರಿ, ಸುಪ್ರಿಯ ಎಸ್. ಕಿನ್ನಿಗೋಳಿ, ಪ್ರತಿಕ್ಷಾ ಶಂಕರನಾರಾಯಣ, ರಕ್ಷಿತಾ ಶಂಕರನಾರಾಯಣ ಮತ್ತು ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷರಾದ ಅಶೋಕ್ ರವರು ಉಪಸ್ಥಿತರಿದ್ದರು.