


ಡೈಲಿ ವಾರ್ತೆ: 25/ಮಾರ್ಚ್ /2025


ಕಾರ್ಕಳ| ಶಾಲೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ

ಉಡುಪಿ: ಕಾರ್ಕಳ ತಾಲೂಕಿನ ಬೆಳ್ಮಣ್, ನಂದಳಿಕೆ ಮತ್ತು ಹಿರ್ಗಾನದ ಗೊರಟ್ಟಿ ಶಾಲೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಕಾರ್ಕಳ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೈಂದೂರು ನಿವಾಸಿ ಅರ್ಷಿತ್ ಅವಿನಾಶ್ ದೋಡ್ರೆ (24) ಎಂದು ಗುರುತಿಸಲಾಗಿದೆ.
ಫೆ.21ರ ರಾತ್ರಿ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಕಛೇರಿಯ ಬೀಗವನ್ನು ಒಡೆದು ಕಪಾಟು ಮತ್ತು ಮೇಜಿನ ಡ್ರಾವರನ್ನು ಒಡೆದು 1,50,000 ರೂ ಹಣ ಮತ್ತು 3 ಡಿವಿಆರ್‌ಗಳನ್ನು ಕಳವು ಮಾಡಲಾಗಿತ್ತು. ಅಲ್ಲದೆ ಶಾಲೆಯ ಸಿಸಿಟಿವಿಯನ್ನು ಹಾಳು ಮಾಡಲಾಗಿತ್ತು.
ಮಾರ್ಚ್ 6ರ ಮಧ್ಯರಾತ್ರಿ ನಂದಳಿಕೆ ಗ್ರಾಮದ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಗೆ ಹಾಕಿದ್ದ ಬೀಗವನ್ನು ಮುರಿದು ಕಪಾಟಿನ ಬಾಗಿಲು ತೆಗೆದು, ರಿಜಿಸ್ಟರ್ ಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಈ ಬಗ್ಗೆಯೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾರ್ಚ್ 4ರ ಮಧ್ಯರಾತ್ರಿ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಸಂತ ಮರಿಯಾ ಗೊರಟ್ಟಿ ಆಂಗ್ಲ ಮಾದ್ಯಮ ಶಾಲೆಯ ಕಛೇರಿಯ ಬೀಗ ಒಡೆದು ಒಳಪ್ರವೇಶಿಸಿ, ಕಪಾಟಿನನಲ್ಲಿದ್ದ 60 ಸಾವಿರ ರೂ ಹಣ, ಮತ್ತು ಐದು ಸಾವಿರ ರೂ ಮೌಲ್ಯದ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಲಾಗಿತ್ತು.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು ಮಾರ್ಚ್ 20ರಂದು ನಿಟ್ಟೆ ಗ್ರಾಮದ ಸಂತ ಲಾರೆನ್ಸ್ ಪ್ರೌಡ ಶಾಲೆಯ ಸಮೀಪ ಅನುಮಾನಾಸ್ಪದವಾಗಿ ಬಿಳಿ ಬಣ್ಣದ ಕಾರಿನಲ್ಲಿ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ವಿಚಾರ ಬಾಯ್ದಿಟ್ಟಿದ್ದ. ಆರೋಪಿ ಅರ್ಷಿತ್ ಅವಿನಾಶ್ ದೋಡ್ರೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್, ಮತ್ತು 84,500 ರೂ ನಗದನ್ನು ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.