


ಡೈಲಿ ವಾರ್ತೆ: 25/ಮಾರ್ಚ್ /2025


ಲಕ್ಷೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ| 23 ಜನರಿಗೆ ಐದು ವರ್ಷ ಕಠಿಣ ಶಿಕ್ಷೆ ಪ್ರಕಟ, ಠಾಣೆಗೆ 12 ಲಕ್ಷ ರೂ. ಪರಿಹಾರ !

ಗದಗ: ಎಂಟು ವರ್ಷದ ಹಿಂದೆ ಲಕ್ಷ್ಮೀಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು 23 ಜನರಿಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.
ರಾಜ್ಯವೇ ಬೆಚ್ಚಿಬಿದ್ದಿದ್ದ ದೊಂಬಿ ಪ್ರಕರಣದಲ್ಲಿ ಎಂಟು ವರ್ಷದ ನಂತರ ತೀರ್ಪು ಹೊರಬಿದ್ದಿದ್ದು ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ದಂಡ ವಸೂಲಿಗೆ ಆದೇಶ ನೀಡಲಾಗಿದೆ.
ದಂಡದ ಮೊತ್ತದಲ್ಲಿ ಪೊಲೀಸ್ ಠಾಣೆಯ ಹಾನಿ ಪರಿಹಾರವಾಗಿ 12 ಲಕ್ಷ 72 ಸಾವಿರ ರೂಪಾಯಿ ನೀಡಲು ಆದೇಶಿಸಲಾಗಿದೆ.
2017ರ ಫೆ.5ರಂದು ಲಕ್ಷೇಶ್ವರ ಪೊಲೀಸ್ ಠಾಣೆಯ ಮುಂದೆ ಸೇರಿದ್ದ ಗುಂಪು ಬೆಂಕಿ ಹಚ್ಚಿ ಆಕ್ರೋಶ ತೋರಿತ್ತು. ಅಕ್ರಮ ಮರಳು ಸಾಗಿಸುವ ವಾಹನ ತಡೆದು ಚಾಲಕನನ್ನು ಪೋಲಿಸರು ಥಳಿಸಿದ್ದರೆಂದು ಆರೋಪದಲ್ಲಿ ಠಾಣೆಗೆ ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ ಬಟ್ಟೂರು ಗ್ರಾಮದ ನಿವಾಸಿ, ಮರಳು ಲಾರಿಯ ಚಾಲಕನಾಗಿದ್ದ ಶಿವಪ್ಪ ಡೋಣಿ ಗಾಯಗೊಂಡು ಸಾವನ್ನಪ್ಪಿದ್ದರು. ಆಸ್ಪತ್ರೆಯಿಂದ ಶವ ತಂದು ಪೊಲೀಸ್ ಠಾಣೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯ ಕಾವು ಹೆಚ್ಚಾಗಿ ರೊಚ್ಚಿಗೆದ್ದ ಜನರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರು. ಗಲಾಟೆ ವೇಳೆ ಪೊಲೀಸ್ ಠಾಣೆಯಲ್ಲಿದ್ದ ಪೀಠೋಪಕರಣ, ಪೊಲೀಸ್ ಜೀಪ್, ಹತ್ತಾರು ದ್ವಿಚಕ್ರ ವಾಹನಗಳಿಗೆ ಬೆಂಕಿಯಲ್ಲಿ ಸುಟ್ಟು ಹೋಗಿತ್ತು. ಪ್ರಕರಣ ನಡೆದ ನಂತರ ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಘಟನೆ ಸಂಬಂಧಿಸಿ ಲಕ್ಷೇಶ್ವರ ಪೊಲೀಸ್ ಠಾಣೆಯಲ್ಲಿ 112 ಜನರ ಮೇಲೆ ಪ್ರಕರಣ ದಾಖಲಾಗಿತ್ತು. 112 ಜನರ ಪೈಕಿ 8 ಜನರು ಮೃತಪಟ್ಟಿದ್ದು, ಓರ್ವ ಬಾಲಪರಾಧಿಯಾಗಿದ್ದ. ಉಳಿದ 103 ಜನರ ಮೇಲೆ ತನಿಖೆ ನಡೆಸಿ ದೋಷಾರೋಪ ಹಾಕಿದ್ದು, ಈ ಪೈಕಿ 23 ಜನರ ಆರೋಪ ಸಾಬೀತಾಗಿದೆ. ಈ ಹಿನ್ನೆಲೆ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಶಿಕ್ಷೆ ಪ್ರಕಟಿಸಿದ್ದು ಭಾರೀ ದಂಡಕ್ಕೆ ಸೂಚಿಸಿದ್ದಲ್ಲದೆ, 23 ಜನ ಆರೋಪಿತರಿಗೆ ಐದು ವರ್ಷ ಶಿಕ್ಷೆ ನೀಡಿದ್ದಾರೆ.