


ಡೈಲಿ ವಾರ್ತೆ: 26/ಮಾರ್ಚ್ /2025


ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣ: ವಿನಯ್, ರಜತ್ ತಡರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರಿಗೆ ಸಂಕಷ್ಟ ಹೆಚ್ಚಿದೆ. ಮಾರ್ಚ್ 25ರ ರಾತ್ರಿ ಇಬ್ಬರನ್ನೂ ಕೋರಮಂಗಲದಲ್ಲಿರುವ 24ನೇ ಎಸಿಜೆಎಂ ಜಡ್ಜ್ ನಿವಾಸಕ್ಕೆ ಪೊಲೀಸರು ಕರೆದುಕೊಂಡು ಹೋದರು.
ಈ ವೇಳೆ ಇಬ್ಬರಿಗೂ ಒಂದು ದಿನ ನ್ಯಾಯಾಂಗ ಬಂಧನ ನೀಡಿ ನ್ಯಾಯಾಧೀಶರು ಆದೇಶಿಸಿದರು. ಈ ಆದೇಶದ ಬೆನ್ನಲ್ಲೆ ಆರೋಪಿ ರಜತ್ ಪತ್ನಿ ಕಣ್ಣೀರು ಹಾಕಿದ್ದಾರೆ.
ರಾತ್ರಿ ಇಡೀ ಜೈಲಿನಲ್ಲಿ
ರಾತ್ರಿ ನ್ಯಾಯಾಧೀಶರು ವಿನಯ್ ಹಾಗೂ ರಜತ್ಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ರಾತ್ರಿ ಇಡೀ ಇಬ್ಬರೂ ಜೈಲಿನಲ್ಲಿ ಕಳೆದಿದ್ದು, ಇವರಿಗೆ ಸಂಕಷ್ಟ ಹೆಚ್ಚುವ ಸೂಚನೆ ಸಿಕ್ಕಿದೆ.
ಇಂದು ಮತ್ತೆ ನ್ಯಾಯಾಲಯದ ಮುಂದೆ:
ಇಂದು (ಮಾರ್ಚ್ 26) ಮತ್ತೆ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ಈ ವೇಳೆ ಒಂದು ವಾರ ಪೊಲೀಸ್ ಕಸ್ಟಡಿಗೆ ಕೊಡಿವಂತೆ ಪೊಲೀಸರು ಮನವಿ ಮಾಡಲಿದ್ದಾರೆ. ಇನ್ನೂ ವಿಚಾರಣೆ ಬಾಕಿ ಇದೆ. ಅಲ್ಲದೆ, ರೀಲ್ಸ್ ಮಾಡಲು ಬಳಕೆ ಮಾಡಿದ್ದ ಮಚ್ಚು ನಾಪತ್ತೆಯಾಗಿದೆ. ಹೀಗಾಗಿ, ಇದರ ಬಗ್ಗೆ ವಿಚಾರಣೆಯ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡುವ ಆಲೋಚನೆಯಲ್ಲಿ ಇದ್ದಾರೆ.
ಜಾಮೀನು ಅರ್ಜಿ:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆದ ರಜತ್ ಹಾಗೂ ವಿನಯ್ ಇಂದು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಇವರ ಪರ ವಕೀಲರು ಇಬ್ಬರಿಗೂ ಜಾಮೀನು ಕೇಳಿ ಕೋರ್ಟ್ನಲ್ಲಿ ಮನವಿ ಮಾಡಲಿದ್ದಾರೆ. ಕೋರ್ಟ್ನಲ್ಲಿ ಇಬ್ಬರ ಭವಿಷ್ಯ ನಿರ್ಧಾರವಾಗಲಿದೆ.
ಕಳೆದ ಹೋದ ಮಚ್ಚು:
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ವೇಳೆ ವಿನಯ್ ಹಾಗೂ ರಜತ್ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ರೀಲ್ಸ್ ಮಾಡಲು ಮಚ್ಚು ಬಳಕೆ ಮಾಡಿದ್ದ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಪೊಲೀಸರು ಕೇಸ್ ದಾಖಲಿಸಿ ತನಿಖೆ ಆರಂಭಿಸಿದರು. ವಿನಯ್ ಹಾಗೂ ರಜತ್ ಅವರನ್ನು ಬಂಧಿಸಿ ವಿಚಾರಣೆ ಮಾಡಿದರು. ಈ ವೇಳೆ ಮಚ್ಚನ್ನು ಹಾಜರುಪಡಿಸುವಂತೆ ಕೇಳಿದ್ದರು. ಪೊಲೀಸರಿಗೆ ರಜತ್ ಹಾಗೂ ವಿನಯ್ ಫೈಬರ್ ಮಚ್ಚನ್ನು ನೀಡಿದ್ದರು. ರೀಲ್ಸ್ಗೆ ಬಳಕೆಯಾದ ನಿಜವಾದ ಮಚ್ಚು ಕಾಣೆಯಾಗಿರುವುದರಿಂದ ಪೊಲೀಸರಿಗೆ ಅನುಮಾನ ಹೆಚ್ಚಾಗಿದೆ.