


ಡೈಲಿ ವಾರ್ತೆ: 27/ಮಾರ್ಚ್ /2025


ಕೋಟ| ವಿವಾದಿತ ಖಾಸಗಿ ಜಾಗದಲ್ಲಿದ್ದ ಐದು ಮನೆಗಳ ಒತ್ತುವರಿ ತೆರವು ಕಾರ್ಯಾಚರಣೆ

ಕೋಟ: ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂದಟ್ಟುವಿನಲ್ಲಿ ಖಾಸಗಿ ಜಾಗವೊಂದಕ್ಕೆ ಸಂಬಂಧಿಸಿದಂತೆ ವಿವಾದದಲ್ಲಿ ಮೂಲ ಮಾಲಕರ ಪರ ಹೈಕೋರ್ಟ್ ಆದೇಶ ನೀಡಿದ್ದು ಜಾಗವನ್ನು ಮೂಲ ಮಾಲಕರಿಗೆ ಬಿಡುಗಡೆ ಮಾಡಿಕೊಡುವಂತೆ ಆದೇಶಿಸಿತ್ತು. ಆದರಂತೆ ಸ್ದಳದಲ್ಲಿದ್ದ ಐದು ಮನೆಗಳ
ಒತ್ತುವರಿ ತೆರವು ಕಾರ್‍ಯಚರಣೆ ಕೋರ್ಟ್ ಅಮೀನ್ ಅವರ ನೇತೃತ್ವದಲ್ಲಿ ಮಾ. 27ರಂದು ಗುರುವಾರ ಬೆಳಿಗ್ಗೆ
ನಡೆಯಿತು.

ಈ ಜಾಗಕ್ಕೆ ಸಂಬಂಧಿಸಿ ಸುಮಾರು 25 ವರ್ಷದಿಂದ ಕಾನೂನು ಹೋರಾಟ ನಡೆಯುತ್ತಿದ್ದು ಮೂಲ ಹಕ್ಕುದಾರರ ಪರವಾಗಿ ಎ.ರಘುರಾಮ್ ಹೆಬ್ಬಾರ್ ಎನ್ನುವವರು ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಆದರೆ ಈ ಸ್ಥಳದಲ್ಲಿ ಮನೆ ಕಟ್ಟಿಕೊಂಡಿದ್ದ ಐದು ಕುಟುಂಬಗಳು ಈ ಸ್ಥಳ
ನಮಗೇ ಸೇರಿದ್ದು ನಮಗೆ ಆರ್.ಟಿ.ಸಿ. ಆಗಿದೆ ಎಂದು ಕಾನೂನು ಹೋರಾಟ ನಡೆಸಿದ್ದರು.
ಅಂತಿಮವಾಗಿ ಮೂಲ ಮಾಲಕರಿಗೆ ಈ ಜಾಗ ಸೇರಿದ್ದು ಒತ್ತುವರಿಯಾಗಿ ನಿರ್ಮಿಸಲಾದ ಮನೆಯನ್ನು
ತೆರವುಗೊಳಿಸಬೇಕು ಎಂದು ಕೋರ್ಟ್ ಆದೇಶ ನೀಡಿತ್ತು.

ಗುರುವಾರ ಜೇಸಿಬಿ ಸಮೇತ ಸ್ಥಳಕ್ಕಾಗಮಿಸಿ ಒತ್ತುವಾರಿಯಾದ ಮೂರು ಮನೆಗಳು ಸಂಪೂರ್ಣವಾಗಿ ನೆಲಸಮಗೊಳಿಸಲಾಯಿತು ಹಾಗೂ ಒಂದು ಮನೆ ಶೇ.90ರಷ್ಟು ಹಾಗೂ ಮತ್ತೊಂದು ಮನೆಯನ್ನು ಶೇ.20 ಭಾಗವನ್ನು ತೆರವುಗೊಳಿಸಲಾಯಿತು.

ಕಾರ್‍ಯಚರಣೆಯ ಸಂದರ್ಭ ಜಾಗದಲ್ಲಿ ವಾಸವಿದ್ದ ಕೆಲವು ಮನೆಯ ಮಾಲಕರು ನಮಗೂ ಕಾನೂನು ಹೋರಾಟ ನಡೆಸಲು ಅವಕಾಶ ನೀಡುವಂತೆ ತತ್‌ಕ್ಷಣ ಮನೆ ನೆಲಸಮಗೊಳಿಸದಂತೆ ಮನವಿ ಮಾಡಿದರು.
ಆಗ ಕೋಟ ಪೊಲೀಸರು ಮಧ್ಯಪ್ರವೇಶಿಸಿ ನಿಮಗೆ ಸಾಕಷ್ಟು ಕಾಲವಕಾಶ ನೀಡಲಾಗಿದೆ. ಈಗ ಕಾನೂನು ಆದೇಶವನ್ನು ಗೌರವಿಸುವಂತೆ ತಿಳಿಸಿ ಮನವೊಳಿಸಿ ಕಾರ್‍ಯಚರಣೆ ಮುಂದುವರಿಸಿದರು.


ಮೂಲ ಮಾಲಕರ ಪರ ರಘುರಾಮ್ ಹೆಬ್ಬಾರ್, ಕೋಟ ಠಾಣೆಯ ಉಪ ನಿರೀಕ್ಷಕರಾದ ರಾಘವೇಂದ್ರ ಪಿ., ಎಸ್ ಐ ಸುಧಾ ಪ್ರಭು, ಕೋರ್ಟ್ ಅಮೀನ್ ಮತ್ತು ಸಿಬಂದಿಗಳು, ಸರ್ವೆ, ಮೆಸ್ಕಾಂ ಇಲಾಖೆಯವರು ಉಪಸ್ಥಿತರಿದ್ದರು.