ಡೈಲಿ ವಾರ್ತೆ: 29/ಮಾರ್ಚ್ /2025

ಬಿಬಿಎಂಪಿ ಕಸದ ಲಾರಿ ಹರಿದು 10ವರ್ಷದ ಬಾಲಕ ಸ್ಥಳದಲ್ಲೇ ಸಾವು- ಸ್ಥಳೀಯರಿಂದ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಥಣಿಸಂದ್ರದ ರೈಲ್ವೇ ಟ್ರ್ಯಾಕ್ ಬಳಿ ಶನಿವಾರ ನಡೆದಿದೆ.

ತಂದೆಯೊಂದಿಗೆ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಐಮಾನ್ (10) ತಲೆ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಲಾರಿಗೆ ಬೆಂಕಿ ಹಚ್ಚಿ, ಚಾಲಕನನ್ನು ಥಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಣ್ಣೂರು ಸಂಚಾರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಮಗನಿಗೆ ಹೆಗಡೆ ನಗರದಲ್ಲಿರುವ ಮದರಸಾದಲ್ಲಿ ಅಡ್ಮಿಷನ್ ಮಾಡಿಸಲು ಐಮಾನ್‌ನ ತಂದೆ ಸ್ಕೂಟರ್‌ನಲ್ಲಿ ಕರೆದೊಯ್ಯುತ್ತಿದ್ದರು. ಥಣಿಸಂದ್ರದ ರೈಲ್ವೆ ಟ್ರ್ಯಾಕ್ ಬಳಿ ಬಂದಾಗ ಕಸದ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ನೆಲಕ್ಕೆ ಬಿದ್ದ ಐಮಾನ್‌ನ ತಲೆ ಮೇಲೆ ಲಾರಿ ಹರಿದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಉತ್ತರ ಸಂಚಾರ ವಿಭಾಗದ ಡಿಸಿಪಿ ಸಿರಿಗೌರಿ ಡಿ.ಆರ್.ತಿಳಿಸಿದ್ದಾರೆ.

ಈ ಹಿಂದೆ ಕೂಡ ಕಸದ ಲಾರಿ ಹರಿದ ಪರಿಣಾಮ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಸಹೋದರಿಯರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜನವರಿ 4ರಂದು ಥಣಿಸಂದ್ರ ಮುಖ್ಯ ರಸ್ತೆಯ ಸರಾಯಿಪಾಳ್ಯದ ಬಳಿ ನಡೆದಿತ್ತು. ಲಾರಿ ಹರಿದ ಪರಿಣಾಮ ನಿಗಾರ್ ಸುಲ್ತಾನಾ (32) ಹಾಗೂ ನಿಗಾರ್ ಇರ್ಫಾನ್ (30) ಎಂಬ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದರು.