ಡೈಲಿ ವಾರ್ತೆ: 04/ಏಪ್ರಿಲ್ /2025

ಅಂಕೋಲಾ|ದರೋಡೆ ಪ್ರಕರಣದ ಆರೋಪಿ ಮಂಗಳೂರು ಮೂಲದ ರೌಡಿಶೀಟರ್ ತಲ್ಲತ್, ನೌಫಾಲ್ ಕಾಲಿಗೆ ಗುಂಡೇಟು

ಅಂಕೋಲಾ: ಮಂಗಳೂರಿನ ಕುಖ್ಯಾತ ತಲ್ಲತ್ ಗ್ಯಾಂಗ್ ನ ರೌಡಿಶೀಟರ್ ತಲ್ಲತ್ ಮತ್ತು ಆತನ ಸಹಚರ ನೌಫಾಲ್ ಎಂಬವರ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತಿ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ.

ಮಂಗಳೂರು ಮೂಲದ ರೌಡಿಶೀಟರ್ ತಲ್ಲತ್, ನೌಫಾಲ್ ಹಾಗೂ ಸಾಹಿಲ್ ಅವರನ್ನು ಮುಂಬಯಿಯಲ್ಲಿ ಬಂಧಿಸಿ ಕರೆತರುತ್ತಿದ್ದಾಗ ಈ ಘಟನೆ ನಡೆದಿದೆ.

ಜನವರಿ 26ರಂದು ಅಂಕೋಲಾ ಬಳಿಯ ರಾಮನಗುಳಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ತಲ್ಲತ್, ನೌಫಾಲ್ ಮತ್ತು ಸಾಹಿಲ್ ಎಂಬವರನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದರು. ಆರೋಪಿಗಳನ್ನು ಅಂಕೋಲಾಕ್ಕೆ ಕರೆತರುವಾಗ ಹಳಿಯಾಳದ ಭಾಗವತಿ ಅರಣ್ಯ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದ ವೇಳೆ ತಲ್ಲತ್ ಮತ್ತು ನೌಫಾಲ್ ಪೊಲೀಸರ ಮೇಲೆ ಮದ್ಯದ ಬಾಟಲಿ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು ಎನ್ನಲಾಗಿದೆ. ಈ ವೇಳೆ ತಲ್ಲತ್ ಮತ್ತು ನೌಫಾಲ್ ಕಾಲಿಗೆ ಗುಂಡಿಕ್ಕಿ ಹೊಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಯಾಳು ಆರೋಪಿಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ಆರೋಪಿ ಸಾಹೀಲ್ ವಾಹನದಲ್ಲಿ ಕುಳಿತುಕೊಂಡಿದ್ದ ಕಾರಣ ಆತನಿಗೆ ಗುಂಡು ಹಾರಿಸದೆ ಅಂಕೋಲಾ ಪೊಲೀಸ್ ಠಾಣೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದರು.