

ಡೈಲಿ ವಾರ್ತೆ: 05/ಏಪ್ರಿಲ್ /2025


ಸೌಜನ್ಯ ಪ್ರಕರಣ: ಏ. 6 ರಂದು ಧರ್ಮಸ್ಥಳದ ಪ್ರತಿಭಟನೆಗೆ ಹೈಕೋರ್ಟ್ ತಾತ್ಕಾಲಿಕ ತಡೆ

ಬೆಳ್ತಂಗಡಿ : ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಏ.6ರಂದು ಧರ್ಮಸ್ಥಳದಲ್ಲಿ ವಿವಿಧ ಸಂಘಟನೆಗಳು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಉದ್ದೇಶಿತ ಪ್ರತಿಭಟನೆ ನಡೆಸಲು ತಡೆಯಾಜ್ಞೆ ನೀಡಬೇಕು ಎಂದು ಕೋರಿ ಧನಕೀರ್ತಿ ಆರಿಗ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿ ಕುರಿತ ಮುಂದಿನ ವಿಚಾರಣೆಯವರೆಗೆ ಪ್ರತಿಭಟನೆ ನಡೆಸಬಾರದು ಎಂದು ಸೂಚಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರತಿಭಟನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಚರ್ಚೆ ನಡೆಸಿರುವ ಕುರಿತಂತೆ ಸಂದೇಶಗಳನ್ನು ಪೀಠಕ್ಕೆ ಗಮನಕ್ಕೆ ತಂದರು. ಅಲ್ಲದೆ, ಈ ಸಂದೇಶಗಳು ನ್ಯಾಯಾಲಯ ಈ ಹಿಂದೆ ಧರ್ಮಸ್ಥಳ ದೇವಾಲಯ ಹಾಗೂ ಧರ್ಮಾಧಿಕಾರಿಗಳ ಪರವಾಗಿ ನ್ಯಾಯಾಲಯ ಹೊರಡಿಸಿದ್ದ ಆದೇಶಗಳನ್ನು ಉಲ್ಲಂಘಿಸುವ ಸಾಧ್ಯತೆಯಿದೆ. ಅಲ್ಲದೆ, ಬಲವಂತವಾಗಿ ದೇವಸ್ಥಾನ ಪ್ರವೇಶಿಸುವ ಯತ್ನಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಪೀಠಕ್ಕೆ ತಿಳಿಸಿದರು.
ತಡೆ ನೀಡಿ ವಿಚಾರಣೆ ಮುಂದೂಡಿದ ಕೋರ್ಟ್: ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಪ್ರತಿಭಟನೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು. ಅಲ್ಲದೆ, ಪ್ರತಿಭಟನೆ ಆಯೋಜಕರಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.
ಹಿನ್ನಲೆ: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದ ಆರೋಪಿಯನ್ನು ಈಗಾಗಲೇ ನಿರಪರಾಧಿ ಎಂಬುದಾಗಿ ನ್ಯಾಯಾಲಯ ಘೋಷಣೆ ಮಾಡಿತ್ತು. ಆದರೆ, ಈ ಕೊಲೆಗೆ ಕಾರಣವೇನು ಎಂದು ಪತ್ತೆ ಹಚ್ಚುವುದಕ್ಕೆ ಆಗ್ರಹಿಸಿ ಬೆಂಗಳೂರು ಹಾಗೂ ಏಪ್ರಿಲ್ 6 ರಂದು ಧರ್ಮಸ್ಥಳದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ವಿವಿಧ ಸಂಘಟನೆಗಳು ಮುಂದಾಗಿದ್ದವು.
ಏಪ್ರಿಲ್ 6ಕ್ಕೆ ವಿಚಾರಣೆ ಮುಂದೂಡಿದ ಪೀಠ: ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡದ ಪೊಲೀಸ್ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಶಾಂತಿಯುತ ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ನಿರಾಕರಿಸಲಾಗದು ಎಂದು ತಿಳಿಸಿತ್ತು. ಆದರೆ, ಇದೀಗ ಏಪ್ರಿಲ್ 6 ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ.