ಡೈಲಿ ವಾರ್ತೆ: 06/ಏಪ್ರಿಲ್ /2025
ಎಕ್ಸಲೆಂಟ್‌ನಲ್ಲಿ ಬೆಸುಗೆ – 2025 ಬೇಸಿಗೆ ಶಿಬಿರ: ಮೊಬೈಲ್ ಗೀಳಿನಿಂದ ದೂರವಿರಿ – ಕು.ಅಕ್ಷಯ ಗೋಖಲೆ

ಕುಂದಾಪುರ : ಕುಂದಾಪುರ ತಾಲೂಕಿನ ಸುಣ್ಣಾರಿಯಲ್ಲಿರುವ ಎಕ್ಸಲೆಂಟ್ ಪಿ.ಯು ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಬೇಸಿಗೆ ಶಿಬಿರ ಬೆಸುಗೆ – 2025ರ ಉದ್ಘಾಟನಾ ಸಮಾರಂಭವು ವಿದ್ಯಾಲಯದ ಆವರಣದಲ್ಲಿರುವ ಸಭಾಂಗಣದಲ್ಲಿ ನೆರವೇರಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಕಳದ ಖ್ಯಾತ ವಾಗ್ಮಿಗಳಾದ ಕುಮಾರಿ ಅಕ್ಷಯ ಗೋಖಲೆಯವರು ದೀಪ ಪ್ರಜ್ವಲನೆಗೈದು ಶಿಬಿರವನ್ನು ಉದ್ಘಾಟಿಸಿದರು.
ಇಂದು ವಿದ್ಯಾರ್ಥಿಗಳು ಸಂವಹನದ ಪ್ರಭಾವಶಾಲಿ ಮಾಧ್ಯಮವಾದ ಮೊಬೈಲ್ ಪೋನಿನ ದಾಸರಾಗುತ್ತಿದ್ದಾರೆ ಮೊಬೈಲ್ ಪೋನಿನ ದುಷ್ಪರಿಣಾಮದಿಂದ ವಿದ್ಯಾರ್ಥಿಗಳನ್ನು ದೂರವಿಟ್ಟು ಅವರನ್ನು ಸೃಜನಶೀಲ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುವಂತೆ ಮಾಡಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿರಬೇಕು ಎಂದು ಕುಮಾರಿ ಅಕ್ಷಯ ಗೋಖಲೆಯವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ನುಡಿದರು.
ಎಮ್ ಎಮ್ ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಟಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮೊಳಹಳ್ಳಿ ಮಹೇಶ್ ಹೆಗ್ಡೆ ಮಾತನಾಡಿ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾದರೆ ನಂತರದ ಗುರು ಮನೆ ಶಾಲೆಯಲ್ಲಿ ನಾವು ಉತ್ತಮ ಗುಣಮಟ್ಟ ಹಾಗೂ ಸಂಸ್ಕಾರಭರಿತ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾ ಬಂದಿದ್ದು ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದನ್ನು ಸ್ಮರಿಸಿಕೊಂಡು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ ವೈದ್ಯ ಹಾಗೂ ಎಕ್ಸಲೆಂಟ್ ಹೈಸ್ಕೂಲು ಮುಖ್ಯೋಪದ್ಯಾಯಿನಿ ಶ್ರಿಮತಿ ಸರೋಜಿನಿ ಪಿ ಆಚಾರ್ಯ ಉಪಸ್ಥಿತರಿದ್ದರು.
ಶಿಕ್ಷಕ ಸಂದೀಪ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಉಷಾಲತಾ ಸ್ವಾಗತಿಸಿ ಶಿಕ್ಷಕಿ ಶಿಲ್ಪಾರಾಣಿ ಧನ್ಯವಾದವಿತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ ವೈದ್ಯರು ಪ್ರಸ್ತಾವನೆಗೈದರು.