

ಡೈಲಿ ವಾರ್ತೆ : 06/04/2025


ಕೋಟ| ಯುವ ವಕೀಲನಿಗೆ ಹನಿ ಟ್ರ್ಯಾಪ್ ಗೆ ಯತ್ನ, ಹಣ ಸುಲಿಗೆ, ದೂರು ದಾಖಲು

ಕೋಟ : ಕುಂದಾಪುರದ ಯುವ ವಕೀಲರೋರ್ವರಿಗೆ ಹನಿಟ್ರ್ಯಾಪ್ ಗೆ ಯತ್ನ ಮತ್ತು ಹಣ ಸುಲಿಗೆಗೆ ಯತ್ನಿಸಿದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಟದಲ್ಲಿ ವಕೀಲರ ಕಚೇರಿ ಹೊಂದಿರುವ ಶ್ಯಾಮಸುಂದರ ನಾಯರಿ ಅವರ ಬಳಿ ಕಿರಿಯ ಸಹಾಯಕ ವಕೀಲನಾಗಿ ಕೆಲಸ ಮಾಡಿಕೊಂಡಿರುವ ನೀಲ್ ಪಿರೇರ ಅವರಲ್ಲಿ 2023ರಲ್ಲಿ ದೇವೆಂದ್ರ ಸುವರ್ಣ ಎನ್ನುವವರು ಮೂಕಾಂಬಿಕ ಎನ್ನುವ ಮಹಿಳೆಯನ್ನು ಕಚೇರಿಗೆ ಕರೆದುಕೊಂಡು ಒಂದು ಕೇಸಿನ ಬಗ್ಗೆ, ಮಾತನಾಡಿಕೊಂಡು ಹೋಗಿದ್ದರು. ಆದೇ ಕೇಸಿನ ವಿಚಾರವಾಗಿ ಮಾತನಾಡಲು ಮೂಕಾಂಬಿಕಾ ಪಿರೇರಾ ಅವರ ಮೊಬೈಲ್ ನಂಬರ್ ನ್ನು ತೆಗೆದುಕೊಂಡಿದ್ದರು.
ಕೆಲವು ದಿನಗಳ ನಂತರ ದೇವೆಂದ್ರ ಸುವರ್ಣನು ಮೂಕಾಂಬಿಕ ಅವರೊಂದಿಗೆ ಕಚೇರಿಗೆ ಬಂದು ರೂ.50ಸಾವಿರ ಹಣವನ್ನು ನೀಡಬೇಕು. ನೀಡದಿದ್ದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ನೀನು ಮೂಕಾಂಬಿಕ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೀಯಾ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದೀಯಾ ಎಂದು ಸುಳ್ಳು ಪ್ರಕರಣವನ್ನು ದಾಖಲಿಸಿ ನಿನ್ನ ಮಾನ ಮರ್ಯಾದೆ ತೆಗೆಯುತ್ತೇನೆ” ಎಂದು ಹೆದರಿಸಿದ್ದರು.
ಇದೇ ರೀತಿ ಪದೇ ಪದೇ ಭಯ ಹುಟ್ಟಿಸಿ ಅವಮಾನ ಪಡಿಸುವುದಾಗಿ ಹೆದರಿಸಿ ಅಲ್ಲದೇ ಗೂಂಡಾಗಳನ್ನು ಬಳಸಿ ಕೊಲ್ಲಿಸುವುದಾಗಿ ಹೆದರಿಸಿ ರೂ.18ಸಾವಿರ ವಸೂಲಿ ಮಾಡಿರುತ್ತಾರೆ ಎಂದು
ಕೋಟ ಪೊಲೀಸ್ ಠಾಣೆಯಲ್ಲಿ ನೀಲ್ ಪಿರೆರಾ ಅವರು ಹನಿ ಟ್ರ್ಯಾಪ್ ಗೆ ಯತ್ನ ಮತ್ತು ಸುಲಿಗೆ ಪ್ರಕರಣ ದಾಖಲಿಸಿದ್ದಾರೆ.