ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಫೈರಿಂಗ್​; ರೌಡಿಶೀಟರ್​ ಕಾಲಿಗೆ ಗುಂಡೇಟು

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದ್ದು, ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್​ ಕಾಲಿಗೆ ಪೊಲೀಸರು ಫೈರಿಂಗ್​ ಮಾಡಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್​​ ಮಲಿಕ್ ತಾಜುದ್ದೀನ್ ಆದೋನಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಆತನ ಕಾಲಿಗೆ ಗುಂಡು ತಗಲಿದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಮಲ್ಲಿಕ್ ತಾಜುವುದ್ದಿನ್ ಆದೋನಿ ಮತ್ತು ರೌಡಿಗಳ ನಡುವೆ ಗಲಾಟೆ ನಡೆದಿತ್ತು. ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಘವೇಂದ್ರ ಕಾಲೋನಿಯ ಸ್ಮಶಾನದ ಹತ್ತಿರ ಬಂಧಿಸಲು ಹೋದ ಪೊಲೀಸ್ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾನೆ. ಈ ಸಮಯದಲ್ಲಿ ಹಳೆ ಹುಬ್ಬಳ್ಳಿ ಪಿಎಸ್ ಐ ವಿಶ್ವನಾಥ ಆಲದಮಟ್ಟಿ, ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸಿಪಿಸಿ ಶರೀಫ್​ ನದಾಫ್ ಗಾಯಗೊಂಡಿದ್ದಾರೆ. ಆರೋಪಿ ಮಲ್ಲಿಕ್​ನನ್ನು ಕೆಎಂಸಿಆರ್​ಗೆ ದಾಖಲಿಸಲಾಗಿದೆ‌.

ಘಟನೆ ಬಗ್ಗೆ ಪೊಲೀಸ್​ ಆಯುಕ್ತರ ಪ್ರತಿಕ್ರಿಯೆ ಹೀಗಿದೆ: ಈ ಕುರಿತಂತೆ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯಿಸಿ, ಹೆಗ್ಗೆರಿ‌ ಮಸೀದಿ ಬಳಿ ಎರಡು ಗುಂಪುಗಳ ನಡುವೆ ಸಂಘರ್ಷವಾಗಿದೆ. ಇರ್ಫಾನ್ ಎಂಬಾತನಿಂದ ಹಣ ಪಡೆದುಕೊಂಡಿದ್ದ ಮಲ್ಲಿಕ್ ತನ್ನ ಸಹಚರರೊಂದಿಗೆ ಬಂದು ಇರ್ಫಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ, ಆರೋಪಿ ಮಲ್ಲಿಕ್ ತಾನೇ ಬ್ಲೇಡಿನಿಂದ ಕೈಗೆ ಗಾಯಮಾಡಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ. ಆತನ ದೂರು ಪಡೆಯಲು ಬಂದ ವೇಳೆ ಪರಿಶೀಲನೆ ಮಾಡಿದಾಗ ಆತನೇ ಆರೋಪಿ ಎಂದು ಗೊತ್ತಾಗಿ ಮಲ್ಲಿಕ್ ನನ್ನು ವಶಕ್ಕೆ ಪಡೆಯಲಾಗಿದೆ. ಇತರ ಆರೋಪಿಗಳನ್ನು ವಶಕ್ಕೆ ಪಡೆಯುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾನೆ. ಆಗ ಎರಡು ರೌಂಡ್ ಏರ್ ಫೈರಿಂಗ್​ ಮಾಡಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಇಬ್ಬರೂ ರೌಡಿಶೀಟರ್​ಗಳು: ಈ ಪ್ರಕರಣದಲ್ಲಿ‌ ಇರ್ಫಾನ್ ಮತ್ತು ಮಲ್ಲಿಕ್ ಇಬ್ಬರೂ ರೌಡಿಶೀಟರ್ ಗಳಾಗಿದ್ದಾರೆ. ಇರ್ಫಾನ್ ಮೇಲೆ ಕೊಲೆ ಹಾಗೂ‌ ಇತರ ಪ್ರಕರಣಗಳಿದ್ದರೆ ಮಲ್ಲಿಕ್​ ಮೇಲೆ ಕೊಲೆ ಯತ್ನ ಹಾಗೂ ಇತರ ಪ್ರಕರಣಗಳು ದಾಖಲಾಗಿವೆ. ಇಬ್ಬರ ಮೇಲೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ. ಆಟೋ ಡ್ರೈವರ್ ಅಂತ ಹೇಳಿಕೊಂಡು ಬಡ್ಡಿ ವ್ಯವಹಾರ, ವಾಹನ ಸೀಜಿಂಗ್ ಸೇರಿದಂತೆ ಇತರ ಕೆಲಸ ಮಾಡಿದ್ದಾರೆ. ಈತನ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಗಡಿಪಾರು ಮಾಡಲಾಗುತ್ತಿದೆ. ಇಂತಹ ಕೃತ್ಯದಲ್ಲಿ ಭಾಗಿಯಾದವರ ಪಟ್ಟಿ ಮಾಡಿ ಕಟ್ಟಿ‌ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್​ ಆಯುಕ್ತರು ಇದೇ ವೇಳೆ ಎಚ್ಚರಿಕೆ ಸಹ ನೀಡಿದ್ದಾರೆ.