


ಡೈಲಿ ವಾರ್ತೆ: 09/ಏಪ್ರಿಲ್/2025


ಶೇ. 79 ಅಂಕ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಹಾಸನ: ನಿನ್ನೆ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 79 ಅಂಕ ಬಂದಿದ್ದರೂ ಕಡಿಮೆ ಎಂದು ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಇಲ್ಲಿನ ಶಿಕ್ಷಕ ಪ್ರಕಾಶ್ ಅವರ ಪುತ್ರ 18 ವರ್ಷದ ಮನೋಜ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಫಲಿತಾಂಶ ನೋಡಿ ಬಂದ ಮನೋಜ್ ನಿನ್ನೆ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಮನೋಜ್ ಅರಸೀಕೆರೆ ನಗರದ ಅನಂತ ಪಿಯು ಕಾಲೇಜಿನಲ್ಲಿ ಪಿಸಿಎಂಬಿ ಸೈನ್ಸ್ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ. ನಿನ್ನೆ ಪ್ರಕಟವಾದ ಪಿಯು ಫಲಿತಾಂಶದಲ್ಲಿ ಶೇಕಡಾ 79 ಅಂಕ ಬಂದಿತ್ತು. ಕನ್ನಡ-98, ಇಂಗ್ಲೀಷ್- 85, ಫಿಸಿಕ್ಸ್-71, ಕೆಮಿಸ್ಟ್ರಿ- 74, ಮ್ಯಾಥ್ಸ್- 82 ಮತ್ತು ಬಯಾಲಜಿ-64 ಒಟ್ಟು-474 ಅಂಕ ಪಡೆದುಕೊಂಡಿದ್ದ. ಫಲಿತಾಂಶ ನೋಡಿ ಬಂದ ಮನೋಜ್ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಸ್ಎಸ್ಎಲ್ಸಿಯಲ್ಲಿ 98%, ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಆಘಾತ
ಕಾಲೇಜಿನಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮನೋಜ್, ಹೆಚ್ಚು ಅಂಕ ಗಳಿರುವ ನೆಚ್ಚಿನ ವಿದ್ಯಾರ್ಥಿಗಳ ಪಟ್ಟಿಯಲ್ಲೂ ಇದ್ದ. ತಾನಾಯಿತು ತನ್ನ ಓದಾಯಿತು ಎನ್ನುವಂತಿದ್ದ ಮನೋಜ್ ಓದುವುದರಲ್ಲಿ ಸದಾ ಟಾಪರ್ ಆಗಿದ್ದ. ಎಸ್ಎಸ್ಎಲ್ಸಿಯಲ್ಲಿ ಶೇಕಡಾ 98 ಅಂಕ ಗಳಿಸಿ ಇಡೀ ತಾಲ್ಲೂಕಿನಲ್ಲಿ ಗಮನ ಸೆಳೆದಿದ್ದ.