


ಡೈಲಿ ವಾರ್ತೆ: 09/ಏಪ್ರಿಲ್/2025


ನಿಡಗುಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಬಿಎಸ್ಎಫ್ ಯೋಧ ಸೇರಿ ಇಬ್ಬರ ಸಾವು

ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ NH 50ರಲ್ಲಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬಿಎಸ್ಎಫ್ ಯೋಧ ಮತ್ತು ಅಂಬ್ಯುಲೆನ್ಸ್ ಚಾಲಕ ಸಾವನ್ನಪ್ಪಿ, ಇತರರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಇಂದು ನಡೆದಿದೆ.
ರಸ್ತೆ ದಾಟುವ ವೇಳೆ ಬೈಕ್ ಗೆ ಡಿಕ್ಕಿ ಹೊಡೆದ ಲಾರಿಯು ಬೈಕ್ಅನ್ನು ಎಳೆದುಕೊಂಡು ಮುಂದಕ್ಕೆ ಹೋಗಿದೆ. ಅಲ್ಲದೆ, ಎದುರಿಗೆ ಬರುತ್ತಿದ್ದ ಅಂಬ್ಯುಲೆನ್ಸ್ ಗೂ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಆಂಬ್ಯುಲೆನ್ಸ್ ಚಾಲಕ ಮತ್ತು ಬೈಕ್ನಲ್ಲಿದ್ದ ಬಿಎಸ್ಎಫ್ ಯೋಧ ಸಾವನ್ನಪ್ಪಿದ್ದಾರೆ. ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಬಿಎಸ್ಎಫ್ ಯೋಧ ಮೌನೇಶ ರಾಠೋಡ್ (35) ಮೃತ ಯೋಧ ಎಂದು ಗುರುತಿಸಲಾಗಿದೆ.
ಲಾರಿ ರಭಸವಾಗಿ ಎದುರಿನಿಂದ ಗುದ್ದಿದ ಪರಿಣಾಮ ಅಂಬ್ಯುಲೆನ್ಸ್ ಸಹ ನಜ್ಜುಗುಜ್ಜಾಗಿದೆ. ಆಂಬ್ಯುಲೆನ್ಸ್ನಲ್ಲಿ ಸಿಲುಕಿದ್ದ ಚಾಲಕ ಸಹಾಯಕನನ್ನು ಕ್ರೇನ್ ಸಹಾಯದಿಂದ ಹೊರ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಬ್ಯುಲೆನ್ಸ್ ಚಾಲಕ ಕೇರಳದ ಕೊಟ್ಟಾಯಂ ನಿವಾಸಿ ರಿತೇಶ್ ಪ್ರಸಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ ಅಪಘಾತಕ್ಕೀಡಾದ ಲಾರಿ, ಆಂಬ್ಯುಲೆನ್ಸ್ ಹಾಗೂ ಬೈಕ್ಅನ್ನು ಸ್ಥಳದಿಂದ ತೆರವು ಮಾಡಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಘಟನೆಯಲ್ಲಿ ಆಂಬ್ಯುಲೆನ್ಸ್ ಸಹಾಯಕ ಮತ್ತು ಲಾರಿ ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.