


ಡೈಲಿ ವಾರ್ತೆ: 13/ಏಪ್ರಿಲ್/2025


ಹುಬ್ಬಳ್ಳಿ| 5 ವರ್ಷದ ಬಾಲಕಿ ಕೊಲೆ ಪ್ರಕರಣ – ಬಿಹಾರ ಮೂಲದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿ!

ಹುಬ್ಬಳ್ಳಿ: ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ, ಕೊಲೆ ಮಾಡಿದ್ದ ಬಿಹಾರ ಮೂಲದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.

ಐದು ವರ್ಷದ ಬಾಲಕಿಯ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಿದ್ದರು. ಇನ್ನು ತನಿಖೆಗೆ ಇಳಿದ ಪೊಲೀಸರಿಗೆ ಆರೋಪಿ ಬಿಹಾರ ಮೂಲದ ರಿತೇಶ್ ಕುಮಾರ್ ಇರುವ ಜಾಗ ಪತ್ತೆಯಾಗಿದೆ. ಈ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದರು. ಆದರೆ ಪೊಲೀಸರ ಮೇಲೆ ರಿತೇಶ್ ಕುಮಾರ್ ಹಲ್ಲೆಗೆ ಯತ್ನಿಸಿದ್ದು ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದರು. ಪೊಲೀಸರು ಹಾರಿಸಿದ ಗುಂಡುಗಳು ಆರೋಪಿಯ ಕಾಲು ಮತ್ತು ಎದೆಯ ಭಾಗಕ್ಕೆ ನುಗ್ಗಿದ್ದರಿಂದ ಅಲ್ಲೆ ಕುಸಿದುಬಿದ್ದನು. ಆರೋಪಿಯನ್ನು ರಕ್ಷಿಸುವ ಸಲುವಾಗಿ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾದರು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಬಾಲಕಿಯ ತಂದೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿತ್ತು. ಬಾಲಕಿ ತಾಯಿ ಮನೆಯೊಳಗೆ ಕೆಲಸ ಮಾಡುತ್ತಿದ್ದು ಹೊರೆಗೆ ಮಗು ಆಟವಾಡುತ್ತಿತ್ತು. ಇದನ್ನು ಗಮನಿಸಿದ ರಿತೇಶ್ ಕುಮಾರ್ ಚಾಕಲೇಟ್ ಕೊಡುವ ಆಸೆ ತೋರಿಸಿ ಬಾಲಕಿಯನ್ನು ಅಪಹರಿಸಿದ್ದ. ಆರೋಪಿಯ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಗಳು ಕಾಣೆಯಾಗಿದ್ದಾಳೆಂದು ತಾಯಿಗೆ ತಿಳಿದಾಗ, ಆಕೆ ಸ್ಥಳೀಯರೊಂದಿಗೆ ಸೇರಿ ಆಕೆಗಾಗಿ ಹುಡುಕಾಟ ಆರಂಭಿಸಿದರು. ಬಾಲಕಿಯ ಪೋಷಕರು ಕೊಪ್ಪಳದವರಾಗಿದ್ದು, ಪೇಂಟಿಂಗ್ ಕೆಲಸಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು ಸ್ಥಳೀಯರ ಪ್ರಕಾರ, ನಿರ್ಮಾಣ ಹಂತದ ಕಟ್ಟಡದ ಬಳಕೆಯಾಗದ ಶೌಚಾಲಯದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.