


ಡೈಲಿ ವಾರ್ತೆ: 18/ಏಪ್ರಿಲ್/2025


ಮಂಗಳೂರು| ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಬಂಧಿತ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಗೆ

ಉಳ್ಳಾಲ: ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಸಾಮೂಹಿಕ ಅತ್ಯಾಚಾರವೆಸಗಿರುವ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಶುಕ್ರವಾರ ಸರಕಾರಿ ರಜಾದಿನದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಮನೆಗೆ ಹಾಜರುಪಡಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ಆರೋಪಿಗಳಾದ ಆಟೋರಿಕ್ಷಾ ಚಾಲಕ ಮುಲ್ಕಿ ಕಾರ್ನಾಡು ಲಿಂಗಪ್ಪಯ್ಯಕಾಡು ನಿವಾಸಿ ಪ್ರಭುರಾಜ್ (38), ಕುಂಪಲ, ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37), ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್(30) ಎಂಬವರನ್ನು ಉಳ್ಳಾಲ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಯುವತಿಗೆ ಮದ್ಯ ಕುಡಿಸಿ ಕುತ್ತಾರು ರಾಣಿಪುರ ಬಳಿಯ ನದಿತೀರದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಆರೋಪದಡಿ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಉಳ್ಳಾಲ ಪೊಲೀಸರು ಕಸ್ಟಡಿಯಲ್ಲಿರುವ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಶನಿವಾರ ಸ್ಥಳ ಮಹಜರು ನಡೆಸುವ ಸಾಧ್ಯತೆಗಳಿವೆ.
ಗ್ಯಾಂಗ್‌ರೇಪ್ ಆಗಿರುವ ಯುವತಿಯ ಸಹೋದರಿ ರಿಕ್ಷಾಚಾಲಕ ಪ್ರಭುರಾಜ್‌ನಿಗೆ 2,000 ರೂ. ಗೂಗಲ್ ಪೇ ಮಾಡಿ, ಆಕೆಯನ್ನು ಸುರಕ್ಷತವಾಗಿ ಪಶ್ಚಿಮ ಬಂಗಾಳಕ್ಕೆ ರೈಲು ಹತ್ತಿಸುವಂತೆ ಕೇಳಿಕೊಂಡಿದ್ದಳು ಎಂದು ಹೇಳಲಾಗಿದೆ. ಆದರೆ ಆಟೊರಿಕ್ಷಾ ಚಾಲಕ ಆರೋಪಿ ಅದನ್ನೇ ದುರ್ಬಳಕೆ ಮಾಡಿ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.