ಡೈಲಿ ವಾರ್ತೆ: 20/ಏಪ್ರಿಲ್/2025

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವರ ಉತ್ಸವ ವೇಳೆ ರಥದ ಮೇಲ್ಬಾಗ ಕುಸಿತ – ನಾಗೇಂದ್ರ ಪುತ್ರನ್ ವಿಷಾದ ವ್ಯಕ್ತ: ದೈವ ದೇವರನ್ನು ದುರ್ಬಳಕ್ಕೆಯಿಂದ ಇಂತಹ ಘಟನೆ ನಡೆಯಲು ಕಾರಣ

ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಳ ಜಾತ್ರೆಯಲ್ಲಿ ರಥದ ಮೇಲ್ಭಾಗ ಉರುಳಿಬಿದ್ದ ಬಗ್ಗೆ ನಾಗೇಂದ್ರ ಪುತ್ರನ್ ವಿಷಾದ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಕ್ಷಾಂತರ ಜನರ ಶ್ರದ್ಧಾ ಕೇಂದ್ರವಾಗಿ, ಧರ್ಮಗಳನ್ನು ಬೆಸೆಯುವ ಶಕ್ತಿ ಸ್ಥಳವಾಗಿ ಪ್ರಸಿದ್ಧಗೊಂಡಿರುವ ಬಪ್ಪನಾಡು ಉತ್ಸವದಲ್ಲಿ ಈ ನಮೂನೆಯಲ್ಲಿ ದುರ್ಘಟನೆ ನಡೆಯಬಾರದಿತ್ತು. ಆದರೂ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬುದೇ ಸಮಾಧಾನಕರ ವಿಷಯ ಎಂದು ತಿಳಿಸಿದ್ದಾರೆ.

ಈ ದುರ್ಘಟನೆಗೆ ಅದ್ಭುತ ಕಾರಣಗಳನ್ನು ಪತ್ತೆ ಮಾಡಿದ ನಾಗೇಂದ್ರ ಪುತ್ರನ್, ತನ್ನದೇ ಧಾಟಿಯಲ್ಲಿ ಮಾಧ್ಯಮದವರಿಗೆ ಅವನ್ನು ವಿವರಿಸಿದ್ದಾರೆ.

ಇದಕ್ಕೆಲ್ಲ ದೈವ ದೇವರ ದುರ್ಬಳಕೆ ಹಾಗೂ ಬಿಜೆಪಿಯವರ ಡ್ಯೂಪ್ಲಿಕೇಟ್ ಹಿಂದುತ್ವವೇ ಕಾರಣ ಎಂಬುದು ಅವರ ಮೊದಲ ಆರೋಪ. ಹಿಂದೆ ಧರ್ಮಗಳ ಜೋಡಣೆ ಮಾಡಬೇಕು ಎಂದು ಬಪ್ಪ ಬ್ಯಾರಿಗೆ ದುರ್ಗಾಪರಮೇಶ್ವರೀ ದೇವಿ ಆಜ್ಞೆ ಮಾಡಿದ್ದರಂತೆ. ಪುರಾತನ ಕಾಲದಿಂದಲೂ ದೇವಿಯ ಈ ಆಜ್ಞೆಯಂತೆಯೇ ಇಲ್ಲಿ ನಡೆಯಲಾಗುತ್ತಿತ್ತು. ಆದರೆ, ಇತ್ತೀಚಿಗಿನ ಬಿಜೆಪಿಯವರ ಡ್ಯೂಪ್ಲಿಕೇಟ್ ಹಿಂದುತ್ವದಿಂದ ದೇವಿಯು ಮುನಿಸಿಕೊಂಡು ಈ ರೀತಿ ಆಗಿದೆ ಎಂಬುದು ಅವರ ವಾದ.

ನಮ್ಮ ಹಿರಿಯರು ಹಾಕಿಕೊಟ್ಟ ಸ್ಪಷ್ಟ ಚೌಕಟ್ಟಿನಲ್ಲಿ ಈ ಕರಾವಳಿ ಪ್ರದೇಶಗಳಲ್ಲಿ ದೇವತಾ ಕಾರ್ಯಗಳು ಮೊದಲಿನಿಂದಲೂ ಎಲ್ಲ ಧರ್ಮಗಳ ಸಮನ್ವಯತೆಯಿಂದ ನಡೆಯುತ್ತಿದ್ದವು. ಆದರೆ, ಕರಾವಳಿ ಭಾಗದಲ್ಲಿ ಈ ಭದ್ರ ಧಾರ್ಮಿಕ ಭಾವನೆಗಳಿಗೇ ಬೆಂಕಿ ಇಟ್ಟ ಕೋಮುವಾದಿ ಬಿಜೆಪಿಯವರಿಂದಾಗಿ ದೇವರೇ ಮುನಿಸಿಕೊಳ್ಳುವಂತಾಯಿತು.

ಸರ್ವ ಧರ್ಮಗಳೂ ಒಂದೇ ಎಂಬ ನೆಲೆಯಲ್ಲಿ ಶಾಂಭವಿ ನದಿ ದಂಡೆಯಲ್ಲಿ ಬಪ್ಪನಾಡು ಕ್ಷೇತ್ರ ಉದಯವಾಯಿತು. ಬಿಜೆಪಿಯವರ ಧರ್ಮ ದುರುಪಯೋಗದಿಂದಾಗಿ ಈ ಪವಿತ್ರ ಭಾವನೆಗೆ ಧಕ್ಕೆ ಒದಗಿದ್ದು ಇಂದು ಇಲ್ಲಿನ ದೈವ ದೇವರುಗಳು ಮುನಿಸಿಕೊಳ್ಳುವ ಕಾಲ ಬಂದಿತು. ಇದನ್ನು ಹೀಗೆಯೇ ಮುಂದುವರೆಯಲು ಬಿಟ್ಟರೆ, ಇಂದು ರಥ ಉರುಳಿದೆ, ನಾಳೆ ದೇವಾಲಯವೇ ಮೈ ಮೇಲೆ ಉರುಳಿ ಬೀಳಬಹುದು ಎಂದು ಪುತ್ರನ್ ಎಚ್ಚರಿಸಿದರು.

ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ನಂಬಬೇಡಿ ಎಂಬ ನಮ್ರ ವಿನಂತಿ ಮಾಡಿದ ನಾಗೇಂದ್ರ ಪುತ್ರನ್, ಪಕ್ಷ ಬೇರೆ ಬೇರೆ ಇರಬಹುದು, ಅದು ರಾಜಕೀಯ ಉದ್ದೇಶಗಳಿಗಾಗಿ. ಆದರೆ, ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ನಂಬಬಾರದು ಎಂದು ಕರೆ ನೀಡಿದ್ದಾರೆ.