ಡೈಲಿ ವಾರ್ತೆ: 21/ಏಪ್ರಿಲ್/2025

ಬಲೆಗೆ ಬಿದ್ದ ಬೃಹತ್‌ ಗಾತ್ರದ ಕಾಟ್ಲಾ ಮೀನು; ಬಂಪರ್‌ ಹೊಡೆದ ಮೀನುಗಾರ

ತೆಲಂಗಾಣ: ಜೀವನ ಸಾಗಿಸಲು ಮೀನು ಹಿಡಿಯುವುದನ್ನೇ ಕಾಯಕ ಮಾಡಿಕೊಂಡವರು ಹಲವರಿದ್ದಾರೆ. ಕೆಲವರು ಆಳ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡರೆ, ಇನ್ನೂ ಕೆಲವರು ನದಿ ನೀರಿನಲ್ಲಿ ಮೀನು ಹಿಡಿಯುವವರಿದ್ದಾರೆ. ಆದ್ರೆ ಸಮುದ್ರದಲ್ಲಿ ಸಿಕ್ಕ ಹಾಗೆ ನದಿಯಲ್ಲಿ ಬೃಹತ್‌ ಗಾತ್ರದ ಮೀನು ಸಿಗುವುದು ಬಲು ಅಪರೂಪ. ನದಿಯಲ್ಲಿ ಯಾವಾಗ್ಲೂ ಸಣ್ಣ ಸಣ್ಣ ಮೀನುಗಳೇ ಬಲೆಗೆ ಬೀಳುತ್ತವೆ. ಆದ್ರೆ ತೆಲಂಗಾಣದ ಮೀನುಗಾರರೊಬ್ಬರಿಗೆ ನದಿ ನೀರಿನಲ್ಲಿ ಬರೋಬ್ಬರಿ 32.5 ಕೆ.ಜಿ ತೂಕದ ಕಾಟ್ಲಾ ಮೀನು ಸಿಕ್ಕಿದೆ. ಮೀನುಗಾರ ನರೇಶ್ ಬೀಸಿದ ಬಲೆಗೆ ದೈತ್ಯಾಕಾರದ ಮೀನು ಬಿದ್ದಿದ್ದು, ಬೃಹದಾಕಾರದ ಮತ್ಸ್ಯ ಕಂಡು ಮೀನುಗಾರ ಫುಲ್‌ ಖುಷಿಯಾಗಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿಯ ಮೀನುಗಾರ ನರೇಶ್‌ ಎಂದಿನಂತೆ ಮಿಡ್‌ ಮಾನೇರು ಡ್ಯಾಮ್‌ ಬಳಿ ಮೀನುಗಾರಿಕೆಗೆ ತೆರಳಿದ್ದರು. ಯಾವಾಗಲೂ ಬೀಳುವ ಹಾಗೆ ಸಣ್ಣಸಣ್ಣ ಮೀನುಗಳೇ ಬೀಳುತ್ತವೆ ಎಂದು ಅವರು ಬೀಸಿದ ಬಲೆಯನ್ನು ನದಿ ನೀರಿನಿಂದ ಮೇಲಕ್ಕೆ ಎತ್ತಿದ್ದರು. ಎಷ್ಟೇ ಎತ್ತಿದರೂ ಬಲೆ ಮೇಲಕ್ಕೆ ಬರಲೇ ಇಲ್ಲ. ಆ ಸಂದರ್ಭದಲ್ಲಿ ನರೇಶ್‌ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಮೆಲ್ಲಗೆ ಬಲೆಯನ್ನು ಮೇಲಕ್ಕೆ ಎತ್ತಿದ್ದು, ಆ ಬಲೆಗೆ ಬಿದ್ದ ದೈತ್ಯಾಕಾರದ ಮೀನನ್ನು ಕಂಡು ನರೇಶ್‌ ಖುಷಿಯಾಗಿದ್ದಾರೆ. ಸಣ್ಣ ಮೀನುಗಳೇ ಬಲೆಗೆ ಬೀಳುತ್ತವೆ ಎಂದುಕೊಂಡಿದ್ದ ನರೇಶ್‌ ಬಲೆಗೆ ಬಿದ್ದ ಬೃಹತ್‌ ಗಾತ್ರದ ಕಾಟ್ಲಾ ಮೀನನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.