



ಡೈಲಿ ವಾರ್ತೆ: 21/ಏಪ್ರಿಲ್/2025

ಜನಿವಾರಕ್ಕೆ ಕತ್ತರಿ ಪ್ರಕರಣ: ಜನಿವಾರಧಾರಿ ಸಮಾಜಗಳಿಂದ ಖಂಡನೆ,
ಸಂವಿದಾನ ಬಾಹಿರವಾಗಿದ್ದು ವಿದ್ಯಾರ್ಥಿಗೆ ನ್ಯಾಯ ನೀಡಲು ಆಗ್ರಹ

ಕೋಟ: ರಾಜ್ಯದ ವಿವಿಧ ಕಡೆಗಳಲ್ಲಿ ಸಿ.ಇ.ಟಿ. ಪರೀಕ್ಷೆಗಾಗಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಘಟನೆಯ ಕುರಿತು ಸಾಲಿಗ್ರಾಮದಲ್ಲಿ ಜನಿವಾರಧಾರಿ ಸಮಾಜಗಳ
ಮುಖಂಡರು ಎ.21ರಂದು ಪತ್ರಿಕಾಗೋಷ್ಠಿ ನಡೆಸಿ ಪ್ರಕರಣವನ್ನು ಖಂಡಿಸಿದರು.

ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯಾಧ್ಯಕ್ಷ ಶಿವರಾಮ ಉಡುಪ ಮಾತನಾಡಿ ಜನಿವಾರ
ಎನ್ನುವಂತದ್ದು ಷೋಡಶ ಕರ್ಮಗಳನ್ನು ಆಚರಿಸುವ ಪ್ರತಿಯೊಂದು ಸಮಾಜಗಳಿಗೆ ಅತ್ಯಂತ ಪವಿತ್ರವಾದದ್ದು. ಈ ಹಿಂದೆ ಯಾವುದೇ ಪರೀಕ್ಷೆಯಲ್ಲಿ ಇದನ್ನು ಕತ್ತರಿಸಿದ ಉದಾಹರಣೆ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಇದೀಗ ನಡೆಯುತ್ತಿರುವ ಪ್ರಕರಣ ಜನಿವಾರ ಧರಿಸುವ
ಪ್ರತಿಯೊಂದು ಸಮಾಜದ ಮನಸ್ಸಿಗೆ ನೋವುಂಟು ಮಾಡಿದೆ. ಸಂವಿದಾನ ಕೂಡ ನಮ್ಮ ಧಾರ್ಮಿಕ
ಆಚರಣೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹೀಗಿರುವಾಗ ನಮ್ಮ ಆಚರಣೆ ಅಡ್ಡಿಪಡಿಸಿದ್ದು ಸಂವಿದಾನಕ್ಕೆ ಮಾಡಿದ ಅವಮಾನವಾಗಿದೆ ಎಂದರು.

ಜಿ.ಎಸ್.ಬಿ. ಸಮಾಜದ ಪುರೋಹಿತ ಚೇಂಪಿ ಪ್ರಕಾಶ್ ಭಟ್ ಮಾತನಾಡಿ, ಈ ಪ್ರಕರಣ ಕೇವಲ ಬ್ರಾಹ್ಮಣ ಸಮಾಜಕ್ಕೆ ಮಾತ್ರ ಆಗಿರುವ ಅಪಮಾನವಲ್ಲ. ಜನಿವಾರ ಧರಿಸುವ ಎಲ್ಲರಿಗೂ ಮಾಡಿದ ದ್ರೋಹವಾಗಿದೆ. ಈ ರೀತಿ ಘಟನೆ ಮುಂದೆ ನಡೆಯಬಾರದು ಎಂದರು.

ವಿಶ್ವಬ್ರಾಹ್ಮಣ ಸಮಾಜದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ಮಾತನಾಡಿ, ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು. ಇಂತಹ ಘಟನೆಗಳು ಮುಂದುವರಿದಂತೆ ನೋಡಿಕೊಳ್ಳಬೇಕು ಹಾಗೂ ಪ್ರಸ್ತುತ ಆಗಿರುವ ಅನ್ಯಾಯಕ್ಕೆ ನ್ಯಾಯ ನೀಡಬೇಕು ಎಂದರು.
ಅನ್ಯಾಯಕೊಳಗಾದ ವಿದ್ಯಾರ್ಥಿಗೆ ಆತ ಬಯಸಿದ ಕಾಲೇಜಿನಲ್ಲಿ, ಬಯಸಿದ ವಿಷಯದ ಕುರಿತು
ಉಚಿತ ಶಿಕ್ಷಣಕ್ಕೆ ಸರಕಾರ ಅವಕಾಶ ಮಾಡಿಕೊಡಬೇಕು ಎನ್ನುವ ಆಗ್ರಹ ಈ ಸಂದರ್ಭ ವ್ಯಕ್ತವಾಯಿತು.
ಈ ಬಗ್ಗೆ ಎಲ್ಲ ಸಮಾಜವನ್ನು ಒಗ್ಗೂಡಿಸಿಕೊಂಡು ಶೀಘ್ರವಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಸೋಮಕ್ಷತ್ರಿಯ ಗಾಣಿಗ ಸಮಾಜದ ಕೋಟ ಯುವ ಸಂಘಟನೆ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ,
ಜಿ.ಎಸ್.ಬಿ. ಸಮಾಜದ ವೆಂಕಟೇಶ್ ಭಟ್, ಬ್ರಾಹ್ಮಣ ಸಮಾಜದ ಪ್ರಮುಖರಾದ ರಾಜಾರಾಮ್
ಐತಾಳ, ಮಂಜುನಾಥ ಉಪಾಧ್ಯ, ಸದಾರಾಮ ಸೋಮಯಾಜಿ, ಸುಬ್ರಹ್ಮಣ್ಯ ಹೇರ್ಳೆ, ಸುಬ್ರಾಯ
ಉರಾಳ, ರಮೇಶ್ ಮಯ್ಯ ಇದ್ದರು.