ಡೈಲಿ ವಾರ್ತೆ: 21/ಏಪ್ರಿಲ್/2025

ಬಿ.ಸಿ.ರೋಡ್ : ಎ. 23 ರಂದು ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಮಾಜ ಬಂಟ್ವಾಳದ ವತಿಯಿಂದ ಧರಣಿ ಸತ್ಯಾಗ್ರಹ

ಬಂಟ್ವಾಳ : ಮುಸ್ಲಿಂ ಸಮಾಜ ಬಂಟ್ವಾಳ ಇದರ ವತಿಯಿಂದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಏ.23 ರಂದು ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಮುಸ್ಲಿಂ ಸಮಾಜದ ಅಧ್ಯಕ್ಷ ಕೆ.ಎಚ್.ಅಬುಬಕರ್ ತಿಳಿಸಿದ್ದಾರೆ.

ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳ ತಾಲೂಕಿನ ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸುವರು ಎಂದರು.

ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಮಾತನಾಡಿ, ಭಾರತದ ಅಭಿವೃದ್ಧಿಗೆ ಮುಸ್ಲಿಮರ ಕೊಡುಗೆ ಅಪಾರವಾಗಿದೆ. ದೇಶದ ಅವಿಭಾಜ್ಯ ಅಂಗವಾಗಿರುವ ಮುಸ್ಲಿಮರು ಸ್ವಾತಂತ್ರ್ಯಪೂರ್ವದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗೆ ಕೊಡುಗೆ ನೀಡಿದ್ದಾರೆ. ಬ್ರಿಟೀಷರ ವಿರುದ್ಧ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಮುಸ್ಲಿಮರ ಹೋರಾಟಗಳು ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಆದರೂ ಮುಸ್ಲಿಮರ ದೇಶಪ್ರೇಮವನ್ನು ಸದಾ ಸಂಶಯಾಸ್ಪದವಾಗಿ ಕಾಣುತ್ತಿರುವುದು ವಿಪರ್ಯಾಸ ಎಂದರು.

2014 ರಿಂದ ಎನ್.ಡಿ.ಎ. ಕೇಂದ್ರದಲ್ಲಿ ಅಧಿಕಾರ ವಹಿಸಿದ ನಂತರ ಪದೇ ಪದೇ ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸಿಯಲು ಹುನ್ನಾರ ನಡೆಸುತ್ತಿದೆ ಎಂದ ಅವರು, ಎನ್.ಆರ್.ಸಿ., ಸಿಎಎ ಯಂಥ ಕಾಯಿದೆಗಳಿಗೆ ಜನ ಸಾಮಾನ್ಯರಿಂದ ಪ್ರತಿರೋಧ ವ್ಯಕ್ತವಾದ ನಂತರ ಇದೀಗ ಸರ್ಕಾರ ವಕ್ಫ್ ತಿದ್ದುಪಡಿ ಕಾನೂನು ತಂದು ಸಂವಿಧಾನಾತ್ಮಕ ಹಕ್ಕುಗಳ ನಿರಾಕರಿಸಲು ಸರ್ಕಾರ ಮುಂದಾಗಿದೆ, ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮಾಜ ಬಂಟ್ವಾಳ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಯಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಸಮಾಜದ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಕಾರ್ಯದರ್ಶಿಗಳಾದ ಇಕ್ಬಾಲ್ ಐಎಂಆರ್, ಇಬ್ರಾಹಿಂ ಕೈಲಾರ್, ಶಾಹುಲ್ ಹಮೀದ್, ಹಿರಿಯ ಸದಸ್ಯ ಪಿ.ಎ. ರಹೀಂ ಉಪಸ್ಥಿತರಿದ್ದರು.