



ಡೈಲಿ ವಾರ್ತೆ: 22/04/2025


ಮಂಥನ ಬೇಸಿಗೆ ಶಿಬಿರ 3ನೇ ದಿನದ ಕಾರ್ಯಕ್ರಮ ಉದ್ಘಾಟನೆ: “ಬದುಕಿನ ಸವಾಲುಗಳು ಯಶಸ್ವಿಗೆ ದಾರಿದೀವಿಗೆ” – ಸುರೇಂದ್ರ ಶೆಟ್ಟಿ

ಕುಂದಾಪುರ: ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು.ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರ ಮೂರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುರೇಂದ್ರ ಶೆಟ್ಟಿ “ಈ ಪರಿಸರದ ಎಲ್ಲಾ ಮಕ್ಕಳಿಗೂ ಉಪಯೋಗವಾಗುವಂತೆ ಬೇಸಿಗೆ ಶಿಬಿರ ಆಯೋಜಿಸಿರುವುದು ಅಭಿನಂದನೀಯ. ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಒಂದೆಡೆ ಸೇರಿಸಿ ಬೇಸಿಗೆ ಶಿಬಿರವನ್ನು ಆಯೋಜಿಸಿ ಚಟುವಟಿಕೆಗಳನ್ನು ನಡೆಸುವುದು ನಿಜಕ್ಕೂ ಒಂದು ಸವಾಲಿನ ಸಂಗತಿ. ಸಮಾಜಮುಖಿ ಚಿಂತನೆಯ ಸದುದ್ದೇಶದಿಂದ ಬೇಸಿಗೆ ಶಿಬಿರವನ್ನು ಈ ಸಂಸ್ಥೆಯು ಆಯೋಜಿಸಿರುವುದು ಇತರರಿಗೆ ಮಾದರಿ. ಜೀವನದಲ್ಲಿ ಎದುರಾಗುವ ಸಾಕಷ್ಟು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನೆಡೆದಾಗ ನಮ್ಮ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಮಕ್ಕಳು ಈ ಶಿಬಿರದಲ್ಲಿ ಕಲಿಸುವ ಎಲ್ಲಾ ಚಟುವಟಿಕೆಗಳನ್ನು ,ವಿಚಾರಗಳನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಂಡು ಸವಾಲುಗಳನ್ನು ಎದುರಿಸುವ ಗುಣವನ್ನು ಕಲಿಯಬೇಕು. ಆ ಮೂಲಕ ಯಶಸ್ಸು ಕಂಡು ತನ್ನ ಗುರಿ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ” ಎಂದರು.

ಶ್ರೀ ಕ್ಷೇತ್ರ ಗುಡ್ಡಟ್ಟು ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾಗಿರುವ ಅನಂತ ಪದ್ಮನಾಭ ಅಡಿಗ ಮಾತನಾಡಿ “ನಮ್ಮ ಗ್ರಾಮೀಣ ಪ್ರದೇಶದಲ್ಲಿ ಇಂತಹ ಉತ್ತಮ ಗುಣಮಟ್ಟದ ಬೇಸಿಗೆ ಶಿಬಿರಗಳು ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮಕ್ಕಳ ಬದುಕಿನುದ್ದಕ್ಕೂ ಉಪಯುಕ್ತವಾಗುವ ಹಲವಾರು ವೈವಿಧ್ಯಮಯ ಚಟುವಟಿಕೆಗಳನ್ನು ಒಳಗೊಂಡ ಈ ಬೇಸಿಗೆ ಶಿಬಿರವು ಬಹಳ ವಿಶೇಷವಾದುದಾಗಿದೆ. ಮಕ್ಕಳು ಈ ಬೇಸಿಗೆ ಶಿಬಿರದಲ್ಲಿ ಉತ್ತಮ ಮೌಲ್ಯಗಳನ್ನು, ತತ್ವಗಳನ್ನು ವಿಚಾರಗಳನ್ನು ಕಲಿತು ಬದುಕಿನುದ್ದಕ್ಕೂ ಅಳವಡಿಸಿಕೊಂಡು ತಂದೆ ತಾಯಿ, ಗುರುಗಳ ಕೀರ್ತಿ, ಗೌರವ ಹೆಚ್ಚಿಸಿ ನಮ್ಮ ದೇಶದ ಉತ್ತಮ ಪ್ರಜೆಗಳಾಗಿ ಬಾಳುವಂತಾಗಬೇಕು”ಎಂದರು.

ಕಾರ್ಯಕ್ರಮದಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ.ಉಪಸ್ಥಿತರಿದ್ದರು.
ಈ ದಿನದ ವಿಶೇಷತೆ:
ಕೃಷಿ ಸಿರಿ ಪ್ರಶಸ್ತಿ ಪುರಸ್ಕೃತ ಸಂಪನ್ಮೂಲ ವ್ಯಕ್ತಿಗಳಾದ ರಘುರಾಮ ಕುಲಾಲ್ ಮತ್ತು ಕಾರ್ತಿಕ್ ಕುಲಾಲ್ ಅವರಿಂದ ಮಣ್ಣಿನ ಕಲಾಕೃತಿ ತಯಾರಿಕೆ ತರಬೇತಿ, ಸೃಜನಶೀಲ ಚಿತ್ರ ಕಲಾವಿದ ರಾಜೇಶ್ ಹಳ್ಳಿಹೊಳೆ ಅವರಿಂದ ಚಿತ್ರಕಲಾ ತರಬೇತಿ,ಮರಳು ಕಲಾಕೃತಿ ರಚನೆ ತರಬೇತಿಯು ಹೆಸರಾಂತ ಕಲಾವಿದರಿಂದ ನಡೆಯಿತು. ಮಕ್ಕಳು ಬಹಳ ಉತ್ಸುಕತೆಯಿಂದ ಮೂರನೇ ದಿನದ ಶಿಬಿರದಲ್ಲಿ ಪಾಲ್ಗೊಂಡರು.