ಡೈಲಿ ವಾರ್ತೆ: 23/ಏಪ್ರಿಲ್/2025

ಬಂಟ್ವಾಳ : ಮುಸ್ಲಿಂ ಸಮಾಜ ಬಂಟ್ವಾಳ ನೇತೃತ್ವದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಧರಣಿ ಸತ್ಯಾಗ್ರಹ

ಬಂಟ್ವಾಳ : ಮುಸ್ಲಿಂ ಸಮಾಜ ಬಂಟ್ವಾಳ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಧರಣಿ ಸತ್ಯಾಗ್ರಹವು ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ಜರುಗಿತು.

 ಮುಸ್ಲಿಂ ಸಮಾಜ ಬಂಟ್ವಾಳ ಅಧ್ಯಕ್ಷ ಕೆ.ಎಚ್ ಅಬೂಬಕ್ಕರ್ ಧರಣಿಯನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮೊಹಮ್ಮದ್ ಸಮಾರೋಪ ಭಾಷಣಗೈದರು. 

ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಬಿ.ರಮನಾಥ ರೈ ಮಾತನಾಡಿ,
ಹಿಂದೆ ಸರ್ಕಾರಗಳು ಜನ ಹಿತಕ್ಕಾಗಿ ಕಾಯ್ದೆಗಳನ್ನು ತಂದಿದ್ಧರೆ ಈಗಿನ ಬಿಜೆಪಿ ಸರ್ಕಾರ ಜನರನ್ನು ಒಡೆಯಲು ಕಾಯ್ದೆಗಳನ್ನು ತರುತ್ತಿದೆ. ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಜಾತ್ಯಾತೀತವಾಗಿ ಹೋರಾಟ ನಡೆಸಿದಂತೆ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧವೂ ಹೋರಾಡಬೇಕಾಗಿದೆ ಎಂದರು.

ಎಸ್ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಮಾತನಾಡಿ, ಕೇಂದ್ರ ಸರ್ಕಾರವು ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿ ಹಾಕಿ ಜನರ ಗಮನವನ್ನು ಬೇರೆಡೆ ಸೆಳೆಯಲು ದೇಶದ ರೈತರ, ಕಾರ್ಮಿಕರ, ಅಲ್ಪಸಂಖ್ಯಾತರ ವಿರುದ್ಧ ದಿನಕ್ಕೊಂದು ಕಾನೂನು ತರುತ್ತಿದೆ. ಇಂತಹ ಎಲ್ಲಾ ಅಸಂವಿಧಾನಾತ್ಮಕ ಕಾನೂನುಗಳನ್ನು ದೇಶದ ಜನತೆ ಒಂದಾಗಿ ಎದುರಿಸೋಣ ಎಂದು ಕರೆ ನೀಡಿದರು.

ಯಾಕುಬ್ ಸಹದಿ ಮಾತನಾಡಿ, ವಕ್ಫ್ ಕಾಯ್ದೆಯ ಮೂಲಕ ಕೇಂದ್ರ ಸರ್ಕಾರವು ಅಲ್ಪ ಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ಕಸಿಯಲು ಹೊರಟಿದೆ. ಜನಸಾಮಾನ್ಯರಿಗೆ ನಿರಂತರ ಮುಸ್ಲಿಮರ ಬಗ್ಗೆ ತಪ್ಪು ಮಾಹಿತಿ ನೀಡುತ್ತಾ ಅವರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಕೆಲವು ಮಾಧ್ಯಮಗಳೂ ತಮ್ಮ ಪತ್ರಿಕಾ ಧರ್ಮ ಮರೆತು ಸರ್ಕಾರದ ಬೆಂಬಲಕ್ಕೆ ನಿಂತಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.

ಸಾಮಾಜಿಕ ಹೋರಾಟಗಾರ ಜಾಫರ್ ಫೈಝಿ ಮಾತನಾಡಿ, ಕೇಂದ್ರ ಸರ್ಕಾರವು ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳನ್ನು ಕೋಮುವಾದದ ಮೂಲಕ ಪಂಕ್ಚರ್ ಮಾಡಿದೆ. ಅದನ್ನು ದುರಸ್ತಿಗೊಳಿಸಿ ದೇಶವನ್ನು ಸಂರಕ್ಷಿಸುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು ಎಂದರು.

ರಫೀವುದ್ಧೀನ್ ಕುದ್ರೋಳಿ ಮಾತನಾಡಿ, ದೇಶದ ಅಲ್ಪಸಂಖ್ಯಾತರ ಸಬಲೀಕರಣದ ಬಗ್ಗೆ ಚಿಂತಿಸಬೇಕಾದ ಪ್ರಧಾನಿ ಅವರನ್ನು ಗೇಲಿ ಮಾಡಲು ಮುಂದಾಗಿರುವುದು ಈ ದೇಶದ ದುರಂತ ಎಂದರು.

ಸಿನಾನ್ ಸಖಾಫಿ ಅಜಿಲಮೊಗರು ಮಾತನಾಡಿ, ಅಲ್ಲಾಹನ ಹೆಸರಲ್ಲಿ ಮುಸ್ಲಿಮರು ದಾನ ಮಾಡಿದ ವಕ್ಫ್ ಆಸ್ತಿಯನ್ನು ಯಾವ ಬೆಲೆ ತೆತ್ತಾದರೂ ಉಳಿಸುತ್ತೇವೆ ಎಂದರು.

ಮಾಜಿ ಮೇಯರ್ ಅಶ್ರಫ್ ಮಾತನಾಡಿ, ಮುಸ್ಲಿಮರನ್ನು ಸದಾ ಬೀದಿಯಲ್ಲಿಯೇ ಕೂರಿಸಬೇಕು
ಎಂಬುದು ಬಿಜೆಪಿ ಸರ್ಕಾರದ ಹುನ್ನಾರವಾಗಿದೆ. ಆದರೆ ನ್ಯಾಯಾಂಗ ವ್ಯವಸ್ಥೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಭರವಸೆ ನಮಗಿದೆ ಎಂದರು.

ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ವಿನೇಶ್ ರೊಡ್ರಿಗಸ್ ಮಾತನಾಡಿ ವಕ್ಫ್ ಆಸ್ತಿಯನ್ನು ರಕ್ಷಿಸಲು ಕಾನೂನು ತರಬೇಕಾದ ಸರ್ಕಾರವು ವಕ್ಫ್ ಆಸ್ತಿಯನ್ನು ಕಬಳಿಸುವ ಭೂಗಳ್ಳರಿಗೆ ಅನುಕೂಲವಾಗುವ ರೀತಿ ವಕ್ಫ್ ಕಾಯ್ದೆ ಜಾರಿ ಮಾಡಿದೆ ಎಂದು ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ಮುಖಂಡರು ಅಮಾನುಲ್ಲಾ ಮಾಸ್ಟರ್ ಬಿಸಿರೋಡ್ ಮಾತನಾಡಿ,
ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆ ಮೂಲಕ ದೇಶವನ್ನು ಒಡೆಯುವ ಸಂಚು ನಡೆಸಿದೆ ಆದರೆ ದೇಶದ ಬಹುಸಂಖ್ಯಾತ ವರ್ಗ ಸತ್ಯದ ಪರ ಇದ್ಧಾರೆ ಎಂದು ನುಡಿದರು.

ಕೆಪಿಸಿಸಿ ಸದಸ್ಯ ಪಿಯೂಸ್ ಎಲ್.ರೊಡ್ರಿಗಸ್ ಮಾತನಾಡಿ, ಜನ ಸಾಮಾನ್ಯರ ಸಹಮತವಿಲ್ಲದ ವಕ್ಫ್ ಕಾಯ್ದೆಯನ್ನು ಸರ್ಕಾರವು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ನೋಟರಿ, ನ್ಯಾಯವಾದಿ ಅಶ್ವಿನಿ ಕುಮಾರ್ ರೈ ಮಾತನಾಡಿ, ಭಾರತದ ಬಹುಸಂಸ್ಕ್ರತಿ ವೈಭವ ಉಳಿಯಬೇಕಾದರೆ ಸರ್ಕಾರವು ಅಸಂವಿಧಾನಾತ್ಮಕ ವಕ್ಫ್ ಕಾಯ್ದೆಯನ್ನು ಹಿಂಪಡೆಯಲೇಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಜಿ.ಎ ಬಾವ, ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮೊನಿಸ್ ಅಲಿ, ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ರಶೀದ್ ವಗ್ಗ,
ಧರಣಿಯನ್ನು ಉದ್ಧೇಶಿಸಿ ಮಾತನಾಡಿದರು. ಹಿರಿಯ ಕವಿ ಮೊಹಮ್ಮದ್ ಬಡ್ಡೂರು ಮತ್ತು ಹನೀಫ್ ಖಾನ್ ಕೊಡಾಜೆ ಕ್ರಾಂತಿ ಗೀತೆಗಳನ್ನು ವಾಚಿಸಿದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಉಸ್ಮಾನ್ ಹಾಜಿ ಕರೋಪಾಡಿ, ಬಿ.ಎಂ.ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ಧಕಟ್ಟೆ, ಮೊಹಮ್ಮದ್ ಅಲ್ತಾಫ್ ಡೈಮಂಡ್, ಪಿ.ಎ.ರಹೀಂ, ಮುಹಮ್ಮದ್ ನಂದಾವರ, ಸಿರಾಜ್ ಮದಕ, ಯೂಸುಫ್ ಕರಂದಾಡಿ, ಎಸ್.ಪಿ.ಸಾಹುಲ್, ಶಾಹುಲ್ ಹಮೀದ್ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

ಧರಣಿಯ ಆರಂಭದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಪೈಶಾಚಿಕ ಕೃತ್ಯದಲ್ಲಿ ಪ್ರಾಣ ಕಳೆದುಕೊಂಡ ಪ್ರವಾಸಿಗರಿಗೆ ಸಂತಾಪ ಸೂಚಕವಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು, ಸಮಾರೋಪದ ಬಳಿಕ ಬಂಟ್ವಾಳ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು

ಇಕ್ಬಾಲ್ ಐಎಂಆರ್ ಸ್ವಾಗತಿಸಿ, ಇಬ್ರಾಹಿಂ ಕೈಲಾರ್ ವಂದಿಸಿದರು. ಜೈನುಲ್ ಅಕ್ಬರ್ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು.